ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ಮನರೇಗಾ)ಯ ಹೆಸರನ್ನು ಮಾತ್ರ ಬದಲಾವಣೆ ಮಾಡುತ್ತಿಲ್ಲ. ಅದರ ಬದಲು ಯೋಜನೆಯನ್ನೇ ರದ್ದುಪಡಿಸಲಾಗಿದೆ. ಈ ಕರಾಳ ಮಸೂದೆ ವಿರುದ್ಧ ಗ್ರಾ.ಪಂ. ಮಟ್ಟದಿಂದ ಕಾಂಗ್ರೆಸ್ ಹೋರಾಟವನ್ನು ಕೈಗೆತ್ತಿಕೊಳ್ಳುತ್ತದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ಮನರೇಗಾ)ಯ ಹೆಸರನ್ನು ಮಾತ್ರ ಬದಲಾವಣೆ ಮಾಡುತ್ತಿಲ್ಲ. ಅದರ ಬದಲು ಯೋಜನೆಯನ್ನೇ ರದ್ದುಪಡಿಸಲಾಗಿದೆ. ಈ ಕರಾಳ ಮಸೂದೆ ವಿರುದ್ಧ ಗ್ರಾ.ಪಂ. ಮಟ್ಟದಿಂದ ಕಾಂಗ್ರೆಸ್ ಹೋರಾಟವನ್ನು ಕೈಗೆತ್ತಿಕೊಳ್ಳುತ್ತದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪ್ರತಿಯೊಂದು ಹಂತದಲ್ಲೂ ಗಾಂಧೀಜಿಯವರ ಹೆಸರನ್ನು ನಾಶಮಾಡಲು ಹೊರಟಿದೆ. ಹೇ ರಾಮ್ ಎಂದು ಹೇಳಿದ್ದ ಗಾಂಧೀಜಿಯವರನ್ನೇ ನಾಶಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಇದನ್ನು ಟೀಕಿಸಿದರೆ ಅವರು ಹಾರಿಕೆಗಳ ಉತ್ತರಗಳನ್ನು ಕೊಡುತ್ತಾರೆ. ಗಾಂಧೀಜಿಯವರು ಕಂಡ ಗ್ರಾಮೀಣ ಅಭಿವೃದ್ಧಿಯ ಕನಸುಗಳೇ ನುಚ್ಚು ನೂರಾಗುತ್ತಿವೆ. ಮನರೇಗಾ ಯೋಜನೆಯನ್ನು ರದ್ದುಪಡಿಸುವ ಮೂಲಕ ಗ್ರಾಪಂಗೆ ನೀಡಿದ್ದ ಶಕ್ತಿಯನ್ನೇ ಅದು ಕಸಿದುಕೊಳ್ಳುತ್ತಿದೆ. ಗೋಡ್ಸೆಯವರು ಒಂದು ಬಾರಿ ಗಾಂಧೀಜಿಯವರನ್ನು ಕೊಂದರೆ ಈ ಬಿಜೆಪಿಯವರು ಪ್ರತಿದಿನ ಗಾಂಧೀಜಿಯವರನ್ನು ಹತ್ಯೆ ಮಾಡುತ್ತಿದ್ದಾರೆ, ಇವರೇ ನಿಜವಾದ ದೇಶದ್ರೋಹಿಗಳು. ನಮ್ಮ ಹೃದಯದಲ್ಲಿ ರಾಮನೂ ಇದ್ದಾನೆ. ಕೃಷ್ಣನೂ ಇದ್ದಾನೆ. ಜೊತೆಗೆ ರಹೀಮನೂ ಇದ್ದಾನೆ ಎಂದರು.
ಉದ್ಯೋಗಖಾತ್ರಿ ಯೋಜನೆಯು ಗ್ರಾಮೀಣ ಭಾಗದಲ್ಲಿ ಉದ್ಯೋಗದಾತರಿಗೆ ಕೆಲಸವನ್ನು ನೀಡಿತ್ತು. ಬಡವರಿಗೆ ಶ್ರಮಿಕರಿಗೆ ಉದ್ಯೋಗ ನೀಡಿತ್ತು. ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿತ್ತು. ಇದೊಂದು ಅದ್ಬುತವಾದ ಯೋಜನೆಯಾಗಿತ್ತು. ಈಗ ಈ ಯೋಜನೆಯನ್ನೇ ರದ್ದುಪಡಿಸಿ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದೀಗ ಗ್ರಾಪಂಗಳ ಕಾಮಗಾರಿಗಳು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಲಿದೆ. ಕೇಂದ್ರ ಸರ್ಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮಗಳಲ್ಲಿನ ಕಾರ್ಮಿಕರು ಮಾತ್ರ ಇದರ ಲಾಭ ಪಡೆಯುತ್ತಾರೆ. ಅಧಿಸೂಚನೆಯಿಂದ ಹೊರಗುಳಿದ ಗ್ರಾಮಗಳ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗುತ್ತಾರೆ. ಮತ್ತು ಎಲ್ಲಾ ದಿನಗಳಲ್ಲೂ ಕೆಲಸ ಸಿಗುವುದಿಲ್ಲ. ಅಲ್ಲದೆ ಕೂಲಿಗೆ ಖಾತರಿಯೂ ಇಲ್ಲ. ಇದು ಕೇವಲ ಕೇಂದ್ರ ಸರ್ಕಾರ ಪಂಚಾಯ್ತಿಗಳಿಗೆ ನೀಡುವ ಅನುದಾನದ ಮೇಲೆ ನಿರ್ಧಾರವಾಗುತ್ತದೆ ಎಂದು ಆರೋಪಿಸಿದರು.ಈ ಯೋಜನೆಯ ವೇತನವನ್ನು ಈ ಹಿಂದೆ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಈಗ ವೇತನವನ್ನು ವಿಭಜಿಸಿ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.೪೦ರಷ್ಟು ನೀಡಬೇಕಾಗಿದೆ. ಕರ್ನಾಟಕ ರಾಜ್ಯವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೇಂದ್ರದಿಂದ ಬರುವ ಅನುದಾನದ ಕೊರತೆಯಿದೆ. ಇವು ಹೇಗೆ ತಾನೇ ಹೆಚ್ಚುವರಿ ಹೋರಲು ಸಾಧ್ಯ ? ಅಲ್ಲದೆ ರಾಜ್ಯದ ಪಾಲಿನ ಹಣವನ್ನು ಕೇಂದ್ರ ಕೊಡುತ್ತಿಲ್ಲ. ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೂಡ ಅದು ಮಲತಾಯಿ ಧೋರಣೆ ತೋರುತ್ತಿದೆ. ಈಗ ಇದು ಮತ್ತೊಂದು ಹೊರೆಯಾಗಲಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿ ರಾಮ್‌ಜೀ ಯೋಜನೆಯಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ಕನಿಷ್ಠ ವೇತನದ ರಕ್ಷಣೆಯಿಲ್ಲದೆ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಾರೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ. ಪಂಚಾಯ್ತಿಗಳು ಕೇವಲ ಅನುಷ್ಟಾನಗೊಳಿಸುವ ಸಂಸ್ಥೆಗಳಾಗುತ್ತವೆ. ದಲಿತ ಮತ್ತು ಆದಿವಾಸಿ ಸೇರಿದಂತೆ ಅನೇಕ ಬಡಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ ಎಂದು ಆರೋಪಿಸಿದರು.ಆದ್ದರಿಂದ ವಿಕಸಿತ ಭಾರತ್ ಜಿ ರಾಮ್‌ಜೀ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ನರೇಗಾ ಯೋಜನೆಯನ್ನೇ ಮುಂದುವರಿಸಬೇಕು. ಜನರ ಉದ್ಯೋಗದ ಹಕ್ಕನ್ನು ಪುನರ್‌ಸ್ಥಾಪಿಸಬೇಕು. ಗ್ರಾ.ಪಂ.ಗಳನ್ನು ಗಟ್ಟಿಗೊಳಿಸಬೇಕು. ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಬೇಕು, ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಗ್ರಾಪಂ ಮಟ್ಟದಿಂದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಕೇರಳದಲ್ಲಿರುವ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆ ಹೇರಿಕೆ ಮಾಡಲಾಗಿದೆ. ಈ ಕುರಿತು ಸರ್ಕಾರದ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದ್ವಿತೀಯ ಪಿಯು ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲಾಗೇಣಿ ಜಮೀನಿಗೆ ಸಂಬಂಧಿಸಿದಂತೆ ಕಾಯ್ದೆ ರೂಪಿಸಲು ಈಗಾಗಲೇ ಯೋಚಿಸಿದ್ದು ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೇಳಲಾಗಿದೆ. 1995ರ ನಂತರ ಆರಂಭವಾದ ಶಾಲೆಗಳಿಗೆ ಅನುದಾನ ನೀಡಲು ಹಣಕಾಸು ಇಲಾಖೆಗೆ ಸೂಚಿಸಲಾಗಿದೆ. ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೇವಲ ಶಿವಮೊಗ್ಗ ಜಿಲ್ಲೆಯವರು ಮಾತ್ರ ಇಲ್ಲ, ಸುಮಾರು 27 ತಾಲೂಕುಗಳ ವ್ಯಾಪ್ತಿ ಇಲ್ಲಿದೆ. ಹಾಗಾಗಿ ಈ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಚೇತನ್‌ಗೌಡ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ವೈ.ಎಚ್. ನಾಗರಾಜ್, ಜಿ.ಡಿ. ಮಂಜುನಾಥ್, ಶರತ್ ಮರಿಯಪ್ಪ, ರವಿಕುಮಾರ್, ದೇವಿಕುಮಾರ್, ಕಲಗೋಡು ರತ್ನಾಕರ್, ಸೈಯದ್ ವಾಹಿದ್ ಅಡ್ಡು, ಚಿನ್ನಪ್ಪ, ಯು. ಶಿವಾನಂದ್ ಉಪಸ್ಥಿತರಿದ್ದರು.