ಸಾರಾಂಶ
ದ್ವೇಷದ ವಿಚಾರಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕುಖ್ಯಾತ ರೌಡಿ ಕುಳ್ಳ ರಿಜ್ವಾನ್ ಮತ್ತು ರೌಡಿ ಸಾಗರ್ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವೇಷದ ವಿಚಾರಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕುಖ್ಯಾತ ರೌಡಿ ಕುಳ್ಳ ರಿಜ್ವಾನ್ ಮತ್ತು ರೌಡಿ ಸಾಗರ್ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಜೂ.7ರಂದು ಸಂಜೆ 6.30ಕ್ಕೆ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳ ವಿಭಾಗದ ಬ್ಯಾರಾಕ್ ಸಂಖ್ಯೆ 3 ಮತ್ತು 4ರ ಎದುರು ಈ ಗಲಾಟೆ ನಡೆದಿದೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ವಿಚಾರಣಾಧೀನ ಕೈದಿಗಳಾದ ವಿಶ್ವನಾಥ, ಮುನಿರಾಜ್, ಜಾಫರ್ ಸಾದಿಕ್, ವಿಶಾಲ್‌ಗೌಡ, ಟಿಪ್ಪು ಸುಲ್ತಾನ್, ಸೇಂದಿಲ್ ಕುಮಾರ್, ಅಜಯ್ ಸಿಂಗ್, ಕುಮಾರ್, ಇರ್ಷಾದ್ ಪಾಷಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಜಗಳದಲ್ಲಿ ಗಾಯಗೊಂಡಿರುವ ವಿಚಾರಣಾಧೀನ ಕೈದಿಗಳಾದ ತೇಜಸ್, ಅಮಿತ್ ಕುಮಾರ್, ಶೇಷಾದ್ರಿ, ಧನುಷ್‌ಗೆ ಕೇಂದ್ರ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ಏನಿದು ಘಟನೆ?
ಜೂನ್ 7 ಸಂಜೆ 6.30ಕ್ಕೆ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳ ವಿಭಾಗದ ಬ್ಯಾರಾಕ್ ಸಂಖ್ಯೆ ಮೂರು ಮತ್ತು ನಾಲ್ಕರ ಎದುರು ರೌಡಿ ಕುಳ್ಳ ರಿಜ್ವಾನ್ ಸಹಚರರು, ರೌಡಿ ಸಾಗರ್ ಸಹಚರರ ಜೊತೆಗೆ ಜಗಳ ತೆಗೆದು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಎರಡು ಗುಂಪುಗಳ ಹೊಡೆದಾಟ ಕಂಡ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿ ಎರಡೂ ಗುಂಪುಗಳನ್ನು ಬೇರ್ಪಡಿಸಿದ್ದಾರೆ.ಎರಡೂ ಗುಂಪುಗಳ ನಡುವೆ ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಫ್ತಾ ವಸೂಲಿ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಜೈಲಾಧಿಕಾರಿಗಳ ದೂರಿನ ಪ್ರಕಾರ ದ್ವೇಷದ ಹಿನ್ನೆಲೆಯಲ್ಲಿ ಈ ಮಾರಾಮಾರಿ ನಡೆದಿರುವ ಸಾಧ್ಯತೆಯಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.