ಸಾರಾಂಶ
ಕೊಪ್ಪಳ: ಮಾದಿಗರ ಒಳಮೀಸಲಾತಿಯ ಮೂವತ್ತು ವರ್ಷದ ಹೋರಾಟದ ಸತತ ಶ್ರಮ ಅಂತಿಮ ಘಟ್ಟಕ್ಕೆ ಬಂದಿದೆ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ. 11ರಿಂದ ಒಳಮೀಸಲಾತಿ ಜಾರಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕು ಎಂದು ದಲಿತ ಮುಖಂಡ ಅಂಬಣ್ಣ ಆರೋಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಒಳ ಮೀಸಲಾತಿ ಹೋರಾಟ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೂವತ್ತು ವರ್ಷಗಳ ಹೋರಾಟದ ಫಲ, ಲಾಭ ಮತ್ತು ನಷ್ಟದ ಬಗ್ಗೆ ಚರ್ಚೆಗಳಿದ್ದು, ಭಾಗವಹಿಸಬೇಕು ಎಂದರು.ಸುಪ್ರೀಂ ಕೋರ್ಟ್ ಆದೇಶದ ನಂತರ ಸರ್ಕಾರಗಳು ಮಾತನಾಡುತ್ತಿಲ್ಲ, ಒಳಮೀಸಲಾತಿ ವಿಚಾರವಾಗಿ ನಮ್ಮಲ್ಲಿ ಹತ್ತಾರು ಸಂಘಗಳು ಆಗಿವೆ. ಇದರಿಂದ ಒಂದಿಷ್ಟು ಗೊಂದಲಗಳಾಗಿವೆ. ಆದರೆ ನಾಗಮೋಹನ್ ದಾಸ್ ಅವರ ವರದಿ ನಿಖರ ಹಾಗೂ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ಆದೇಶವಾಗಿದೆ. ಇದೀಗ ಒಂದು ತಾರ್ಕಿಕ ಹಂತಕ್ಕೆ ಬಂದಿದೆ ಎಂದರು.
ಆಂಧ್ರ-ತೆಲಂಗಾಣದಲ್ಲಿ ಮೀಸಲಾತಿ ಸಿಕ್ಕಿದೆ. ಆದರೆ ನಮ್ಮ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕಡಿಮೆ ಇದೆ. ಈ ಹೋರಾಟಕ್ಕೆ ರಾಜಕೀಯ ಪಕ್ಷ, ಮುಖಂಡರು ಬೆಂಬಲ ನೀಡಿಲ್ಲ. ಮುಖ್ಯಮಂತ್ರಿ ಬಳಿ ಮಾತನಾಡಿದ್ದೇವೆ. ಆದರೂ ನನೆಗುದಿಗೆ ಬಿದ್ದಿದೆ ಎಂದರು.ಒಳ ಮೀಸಲಾತಿ ವಿಚಾರವಾಗಿ ಪಂಜಾಬ್ ಸರ್ಕಾರ ಪ್ರಥಮವಾಗಿ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಕರ್ನಾಟಕದಿಂದ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿದ್ದು, ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಇನ್ನು ಒಳಮೀಸಲಾತಿ ಜೀವಂತವಾಗಿದೆ. ಕಾಂಗ್ರೆಸ್, ಬಿಜೆಪಿ, ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಹಾಗಾಗಿ ಜು. 30ರೊಳಗೆ ವರದಿ ತರಿಸಿಕೊಳ್ಳಬೇಕು. ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಬೇಕು. ಇದು ಮತ್ತೆ ಮುಂದಕ್ಕೆ ಹೋಗಬಾರದು ಎಂದು ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.ಮಾದಿಗ ಮುಖಂಡರಾದ ಕರಿಯಪ್ಪ ಗುಡಿಮನೆ, ಹನುಮಂತಪ್ಪ ಮ್ಯಾಗಳಮನಿ, ಯಲ್ಲಪ್ಪ, ಮಲ್ಲಿಕಾರ್ಜುನ ಪುಜಾರ್, ಪ್ರಕಾಶ ಎಚ್. ಹೊಳೆಯಪ್ಪನವರ್, ದೇವರಾಜ್ ನಡುವಲಮನಿ, ಲಿಂಗಪ್ಪ ಮೈನಳ್ಳಿ, ಮುದಕಪ್ಪ ಹೊಸಮನಿ, ದೇವರಾಜ್ ಕಿನ್ನಾಳ, ಗುರುಮೂರ್ತಿ ನೆರೆಗಲ್, ಶಂಕರ ನೆರೆಗಲ್, ನಾಗರಾಜ ನೆರೆಗಲ್ ಇದ್ದರು.