ಫೆ.12ರಂದು ಕರ್ನಾಟಕಕ್ಕೆ ನ್ಯಾಯ ಕೊಡಿ ಹೋರಾಟ: ಎಲ್‌.ಸಂದೇಶ್‌

| Published : Feb 12 2025, 12:34 AM IST

ಸಾರಾಂಶ

ಕರ್ನಾಟಕ ದೇಶದಲ್ಲೇ ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯದ ಪಾಲನ್ನು ನೀಡುವಾಗ ಕಡೆಯ ಸ್ಥಾನಕ್ಕೆ ಕಳುಹಿಸಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಕಡಿಮೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬಜೆಟ್ ವಿಚಾರದಲ್ಲೂ ಚುನಾವಣೋತ್ತರ ರಾಜ್ಯಗಳಿಗೆ ಹೆಚ್ಚಿನ ಮಾನ್ಯತೆ ನೀಡಿ ಕರ್ನಾಟಕವನ್ನು ನಿರ್ಲಕ್ಷಿಸುತ್ತಿರುವುದು ದುರಂತ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಆಗ್ರಹಿಸಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಫೆ.12ರಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ 10.30ಕ್ಕೆ ನಗರದ ಸರ್ ಎಂ.ವಿ. ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ನಿರಂತರವಾಗಿ ಅನ್ಯಾಯ ನಡೆಯುತ್ತಲೇ ಇದ್ದು, ಈ ಬಗ್ಗೆ ಧ್ವನಿ ಎತ್ತುತ್ತಿದ್ದರೂ ದೆಹಲಿಯ ದೊರೆಗಳು ಕಿವಿಗೊಡುತ್ತಿಲ್ಲ. ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ತಾರಮ್ಯ ಧೋರಣೆ ಅನುಸರಿಸಲಾಗುತ್ತಿದೆ.

ಕರ್ನಾಟಕ ದೇಶದಲ್ಲೇ ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯದ ಪಾಲನ್ನು ನೀಡುವಾಗ ಕಡೆಯ ಸ್ಥಾನಕ್ಕೆ ಕಳುಹಿಸಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಕಡಿಮೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬಜೆಟ್ ವಿಚಾರದಲ್ಲೂ ಚುನಾವಣೋತ್ತರ ರಾಜ್ಯಗಳಿಗೆ ಹೆಚ್ಚಿನ ಮಾನ್ಯತೆ ನೀಡಿ ಕರ್ನಾಟಕವನ್ನು ನಿರ್ಲಕ್ಷಿಸುತ್ತಿರುವುದು ದುರಂತ ಎಂದಿದ್ದಾರೆ.

ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರವಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ತಾಂತ್ರಿಕ ಕಾರಣ ಮುಂದಿಟ್ಟು ಅಣೆಕಟ್ಟು ನಿರ್ಮಾಣಕ್ಕೆ ಅಡ್ಡಿಯಾಗಿದೆ. ಸಾಂವಿಧಾನಿಕ ಹುದ್ದೆಗಳಾದ ಇ.ಡಿ. ಮತ್ತು ಐಟಿಯನ್ನು ರಾಜಾರೋಷವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತದ ಸಂಕೇತವಾಗಿರುವ ರಾಜ್ಯಪಾಲರು ಕೂಡ ಜನರ ಸರ್ಕಾರದ ನಿಲುವುಗಳಿಗೆ ನಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ವಿಷಾದನೀಯವಾಗಿದೆ.

ಸಾಂಸ್ಕೃತಿಕವಾಗಿ ಕೂಡ ಕರ್ನಾಟಕದ ರಾಜ್ಯದ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದು, ಹಿಂದಿ ಹೇರಿಕೆಯಂತಹ ಸರ್ವಾಧಿಕಾರಿ ಧೋರಣೆ ಅಪಾಯಕಾರಿಯಾಗಿದೆ. ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ವಿಚಾರದಲ್ಲಿ ದಕ್ಷಿಣ ರಾಜ್ಯಗಳ ನಡುವೆ ವಿವಾದಗಳನ್ನು ಗಂಟುಹಾಕಿ ಪರಸ್ಪರ ಇತ್ಯರ್ಥಗೊಳಿಸುವಂತೆ ಸೂಚಿಸುವ ಮೂಲಕ ಈ ರಾಜ್ಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಪ್ರಯತ್ನವನ್ನು ಈ ಸರ್ಕಾರ ಮಾಡುತ್ತಿದ್ದು, ಒಕ್ಕೂಟ ವ್ಯವಸ್ಥೆಯ ಬಗ್ಗೆ ನಂಬಿಕೆ ಇಟ್ಟಿರುವ ಕರ್ನಾಟಕದ ಏಳಿಗೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.