ಧಾರವಾಡ:

ಬಾಗಿಲು ಮುಚ್ಚುವ ಕಾರಣಕ್ಕೆ ಆರಂಭವಾದ ಸಹೋದರ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಮಲ್ಲಯ್ಯ ಚಿಕ್ಕಮಠ ಅವರನ್ನು ತಮ್ಮ ಶ್ರೀಕಾಂತ ಚಿಕ್ಕಮಠ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಗ್ರಾಮದ ಕುಂಬಳಕಾಯಿ ಓಣಿಯಲ್ಲಿ ಚಿಕ್ಕಮಠ ಕುಟುಂಬ ನೆಲೆಸಿದೆ. ಒಂದೇ ಮನೆಯಾಗಿದ್ದರೂ ಮುಂಭಾಗದಲ್ಲಿ ತಮ್ಮ ಶ್ರೀಕಾಂತ್ ತಾಯಿಯೊಂದಿಗೆ ವಾಸವಾಗಿದ್ದರೆ, ಅದೇ ಮನೆಯ ಹಿಂಭಾಗದಲ್ಲಿ ಆತನ ಅಣ್ಣ ಮಲ್ಲಯ್ಯ ಪತ್ನಿ ಹಾಗೂ ಕುಟುಂಬ ನೆಲೆಸಿದೆ. ಇಬ್ಬರ ನಡುವೆ ಬಾಗಿಲೊಂದು ಇದ್ದು, ಅದೇ ಇದೀಗ ಕೊಲೆಗೆ ಕಾರಣವಾಗಿದೆ. ಮನೆಯ ಹಿಂದಿನ ಭಾಗದಲ್ಲಿ ವಾಸವಾಗಿರುವ ಅಣ್ಣ ಮಲ್ಲಯ್ಯನ ಕುಟುಂಬ ತಮ್ಮ ಮನೆಗೆ ಹೋಗಬೇಕೆಂದರೆ ಶ್ರೀಕಾಂತನ ಮನೆಯ ಮೂಲಕವೇ ಹೋಗಬೇಕು. ಹೀಗಾಗಿ ಎರಡೂ ಮನೆಗಳ ನಡುವಿನ ಬಾಗಿಲು ವಿಚಾರವಾಗಿ ಆಗಾಗ ಸಹೋದರರ ನಡುವೆ ಸಣ್ಣ-ಪುಟ್ಟ ಜಗಳಗಳು ನಡೆದೇ ಇರುತ್ತಿದ್ದವು.

ಸೋಮವಾರ ಸಂಜೆ ಬಾಗಿಲು ಮುಚ್ಚುವ-ತೆರೆಯುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವುಂಟಾದಾಗ ಮನೆಯಲ್ಲಿನ ಚಾಕು ತಂದ ಅಣ್ಣ ಮಲ್ಲಯ್ಯ ತಮ್ಮನಿಗೆ ಇರಿಯಲು ಹೋಗಿದ್ಧಾನೆ. ಆದರೆ, ಶ್ರೀಕಾಂತ ತಪ್ಪಿಸಿಕೊಂಡು ಅಣ್ಣನ ಬಳಿ ಇದ್ದ ಚಾಕು ಕಸಿದು ಮಲ್ಲಯ್ಯನ ಎದೆ ಹಾಗೂ ಬೆನ್ನಿಗೆ ಇರಿದು ಪರಾರಿಯಾಗಿದ್ದಾನೆ.


ಅತೀವ ರಕ್ತಸ್ರಾವದಲ್ಲಿದ್ದ ಮಲ್ಲಯ್ಯನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ರಾತ್ರಿ ರವಾನಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಶ್ರೀಕಾಂತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಮಾಹಿತಿ ನೀಡಿದ್ದಾರೆ.

ಗ್ರಾಮದ ಚಿಕ್ಕಮಠ ಕುಟುಂಬಕ್ಕೆ ಇರುವ ತುಂಡು ಭೂಮಿಯಲ್ಲಿಯೇ ಕೃಷಿ ಮಾಡಿಕೊಂಡಿದ್ದ ಅಣ್ಣ-ತಮ್ಮಂದಿರ ನಡುವೆ ಮನೆಯ ಬಾಗಿಲು ಸೇರಿದಂತೆ ಸಣ್ಣ-ಪುಟ್ಟ ವಿಷಯಗಳಿಗೆ ಜಗಳವಾಗುತ್ತಿದ್ದು, ಇದೀಗ ಅದು ಕೊಲೆ ಹಂತಕ್ಕೆ ಹೋಗಿದೆ. ಚಿಕ್ಕಮಠ ಕುಟುಂಬದ ಮುಖ್ಯಸ್ಥ ಕೊಲೆಯಾದರೆ, ಅದೇ ಕುಟುಂಬದ ಇನ್ನೊಂದು ಕಣ್ಣಾಗಿದ್ದ ತಮ್ಮ ಶ್ರೀಕಾಂತ ಜೈಲು ಪಾಲಾಗಿದ್ದು, ಇವರಿಬ್ಬರ ಕುಟುಂಬ ಬೀದಿಗೆ ಬಿದ್ದಿರುವುದು ದುರ್ದೈವ.