ದಾರಿ ಸಮಸ್ಯೆ ಬಗೆಹರಿಯುವವರೆಗೂ ಹೋರಾಟ

| Published : Jun 16 2025, 12:47 AM IST

ಸಾರಾಂಶ

ಹಿರಿಯೂರು ನಗರದ ವೇದಾವತಿ ನಗರದಲ್ಲಿರುವ ಉಪ್ಪಾರ ಸಮುದಾಯ ಭವನದಲ್ಲಿ ಭಾನುವಾರ ಉಪ್ಪಾರ ಸಮಾಜದ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಉಪ್ಪಾರ ಸಮುದಾಯ ಭವನದ ದಾರಿ ಸಮಸ್ಯೆ ಇತ್ಯರ್ಥವಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿದ್ದು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಸಮಾಜದ ಹಿರಿಯ ಮುಖಂಡ ಪದ್ಮನಾಭ ಹೇಳಿದರು.

ನಗರದ ವೇದಾವತಿ ನಗರದಲ್ಲಿರುವ ಉಪ್ಪಾರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಉಪ್ಪಾರ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉಪ್ಪಾರ ಸಮುದಾಯ ಭವನದ 25 ಲಕ್ಷ ರು. ವೆಚ್ಚದ ಮುಂದುವರೆದ ಕಾಮಗಾರಿ ಸ್ಥಗಿತಗೊಂಡು ಸುಮಾರು ಒಂದೂವರೆ ವರ್ಷಗಳು ಕಳೆದಿದ್ದು ಉತ್ತಮ ಗುಣಮಟ್ಟದ ಕಾಮಗಾರಿಯೂ ನಡೆದಿಲ್ಲ. ಇದಕ್ಕೆ ಕಾಮಗಾರಿ ನಿರ್ವಹಿಸುತ್ತಿರುವ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣ. ಆದ್ದರಿಂದ ಕೂಡಲೇ ಸಂಬoಧಪಟ್ಟ ಅಧಿಕಾರಿಗಳು ಕ್ರಮವಹಿಸುವ ಮೂಲಕ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಆಲೂರು ರಾಮಣ್ಣ ಮಾತನಾಡಿ, ದಾರಿ ಸಮಸ್ಯೆ ಸುಮಾರು ವರ್ಷಗಳ ಬೇಡಿಕೆಯಾಗಿದ್ದು ಸತತ ಹೋರಾಟದ ಫಲವಾಗಿ ಇಂದು ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ತಹಸೀಲ್ದಾರ್ ಹಾಗೂ ಪೌರಾಯುಕ್ತರು ಜಾಗ ನಿಗದಿ ಮಾಡಿದ್ದಾರೆ. ಆದರೂ ರಸ್ತೆ ಒತ್ತುವರಿ ಬಿಟ್ಟುಕೊಡುತ್ತಿಲ್ಲ. ಇದು ಹೀಗೇ ಮುಂದುವರೆದರೆ ನಾವು ಸಹ ರಸ್ತೆ ಮುಚ್ಚ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕರಿಯಾಲಪ್ಪ, ಸಮಾಜದ ಮುಖಂಡರಾದ ಗುಣಶೇಖರಪ್ಪ, ಮೂಡ್ಲಪ್ಪ, ಶಂಕರಪ್ಪ, ಕರಿಯಣ್ಣ, ಶೇಖರಪ್ಪ, ರಾಮಾಂಜನೇಯ, ಶ್ರೀನಿವಾಸ್, ಶಿವಮೂರ್ತಿ ಮುಂತಾದವರು ಹಾಜರಿದ್ದರು.