ಸಾರಾಂಶ
ಹರಪನಹಳ್ಳಿ: ಹೋರಾಟಗಾರರು ಸಮಾಜದ ಒಂದು ಭಾಗ ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ಹೊರವಲಯದ ಸಮತಾ ರೆಸಾರ್ಟ್ ಸಭಾಂಗಣದಲ್ಲಿ ಸಾಮೂಹಿಕ ಸಂಘಟನೆಗಳ ಹೋರಾಟ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಪರ ಚಳವಳಿ ಹೋರಾಟಗಾರ ಪುಣಬಗಟ್ಟ ಎಸ್. ನಿಂಗಪ್ಪ ಅವರ ನುಡಿ-ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾರ್ಥವನ್ನು ಮರೆತು ತಮ್ಮನ್ನು ತಾವು ಸಮಾಜಕ್ಕೆ ಹೋರಾಟಗಾರರು ಅರ್ಪಣೆ ಮಾಡಿಕೊಂಡಿರುತ್ತಾರೆ ಎಂದ ಅವರು, ಸದಾ ಜನಪರ ಚಳವಳಿಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಪುಣಬಗಟ್ಟ ಎಸ್. ನಿಂಗಪ್ಪ ಅವರ ಅಕಾಲಿಕ ಸಾವು ನಿಜಕ್ಕೂ ಸಮಾಜಕ್ಕೆ ನೋವುಂಟು ತಂದಿದೆ. ಅವರ ಸಾಮಾಜಿಕ ಕಾಳಜಿ ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದರು.ನಿವೃತ್ತ ಉಪನ್ಯಾಸಕ ರಾಜಪ್ಪ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಸದಾ ತೊಡಗಿಕೊಳ್ಳುತ್ತಿದ್ದ ಪುಣಬಗಟ್ಟ ಎಸ್. ನಿಂಗಪ್ಪ ಅವರು ಇನ್ನು ಹೆಚ್ಚು ಕಾಲ ಬದುಕಿ ಬಾಳಬೇಕಿತ್ತು. ಅವರಲ್ಲಿ ಹೋರಾಟದ ಕಿಚ್ಚು ಇತ್ತು ಎಂದು ಸ್ಮರಿಸಿದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ನಿಂಗಪ್ಪ ಅವರ ಆಲೋಚನೆಗಳು ಜಾತ್ಯತೀತವಾಗಿದ್ದವು. ಸರ್ವಜನಾಂಗದವರ ಜತೆ ಪ್ರೀತಿ-ವಿಶ್ವಾಸದಿಂದ ಬೇರೆಯುತ್ತಿದ್ದರು ಎಂದರು.ದಾವಣಗೆರೆ ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ. ಕೊಟ್ರೇಶ ಮಾತನಾಡಿ, ನಿಂಗಪ್ಪ ಅವರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಪುಣಬಗಟ್ಟ ಎಸ್. ನಿಂಗಪ್ಪ ಅವರ ಕುಟುಂಬಕ್ಕೆ ₹25 ಸಾವಿರ ಆರ್ಥಿಕ ಸಹಾಯ ಸಹಾಯ ನೀಡಿದರು.ಹೊಸಳ್ಳಿ ಮಲ್ಲೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಮಾನವ ಸಮಿತಿ ಅಧ್ಯಕ್ಷ ರುದ್ರಮುನಿ, ಜಯಣ್ಣ, ಮನೋಹರ, ರಾಮಚಂದ್ರಪ್ಪ, ಎ.ಎಂ. ವಿಶ್ವನಾಥ್, ಗುಡಿಹಳ್ಳಿ ಹಾಲೇಶ, ಚಂದ್ರಪ್ಪ, ಕಣಿವಿಹಳ್ಳಿ ಮಂಜುನಾಥ, ಮಹಾಂತೇಶ, ರಾಮಣ್ಣ, ಕುಮಾರ, ಸತೀಶ ಇದ್ದರು.