ಸಾರಾಂಶ
ಭಟ್ಕಳ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ತಿರಸ್ಕೃತಗೊಂಡ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದು ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಪರ ಸುಪ್ರೀಂಕೋರ್ಟ್‌ನಲ್ಲಿ ಕಾನೂನಾತ್ಮಕ ವಾದ ಮಂಡಿಸಲಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಸೋಮವಾರ ಪಟ್ಟಣದಲ್ಲಿ ನಡೆದ ಅರಣ್ಯವಾಸಿಗಳ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯವಾಸಿಗಳಿಗೆ ಅರಣ್ಯ ಸಾಗುವಳಿ ಹಕ್ಕಿಗೆ ಸಂಬಂಧಿಸಿ ಅರಣ್ಯ ಹಕ್ಕು ಕಾಯ್ದೆಯ ಕೊನೆಯ ಕಾನೂನು ಆಗಿದ್ದು, ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ವಂಚಿತರಾಗದಂತೆ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳು ಆತಂಕ ಪಡುವ ಅಗತ್ಯವಿಲ್ಲವೆಂದ ಎಂದ ಅವರು, ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿನ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ೬೯,೭೩೩ ಅರ್ಜಿಗಳು ಕಾನೂನು ವ್ಯತಿರಿಕ್ತವಾಗಿ ಅರ್ಜಿ ತಿರಸ್ಕಾರವಾಗುವುದು ವಿಷಾದಕರ. ಅರಣ್ಯವಾಸಿಗಳು ಈ ಬಗ್ಗೆ ಭಯಗೊಳ್ಳಬಾರದು. ಅರಣ್ಯವಾಸಿಗಳ ಪರವಾಗಿ ವೇದಿಕೆ ಕಾನೂನು ಹೋರಾಟ ನಡೆಸುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.
ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳ್ಕೆ, ತಾಲೂಕು ಸಂಚಾಲಕ ಚಂದ್ರು ನಾಯ್ಕ ಬೆಳ್ಕೆ, ಮೂದು ಮಳ್ಳ ನಾಯ್ಕ, ರತ್ನಾ ನಾಯ್ಕ, ಗಣಪತಿ ನಾರಾಯಣ ನಾಯ್ಕ ಹಾಡುವಳ್ಳಿ, ರಕ್ಷಿತ ಎಂ. ಗೊಂಡ ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ ಅರಣ್ಯವಾಸಿಗಳಿದ್ದರು. ಕಸ್ತೂರಿರಂಗನ್ ವರದಿ ವಿರೋಧಿಸಿ ಕೇಂದ್ರದ ಮೇಲೆ ಒತ್ತಡಯಲ್ಲಾಪುರ: ಕಸ್ತೂರಿರಂಗನ್ ಅವೈಜ್ಞಾನಿಕ ಕರಡು ವರದಿಯನ್ನು ಜಾರಿಗೆ ತರದಂತೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದೇವೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಅ. ೨೭ರಂದು ತಾಲೂಕಿನ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡಿ, ಕರಡು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಹೋರಾಟಗಾರರ ವೇದಿಕೆಯು ೧ ಲಕ್ಷ ಕುಟುಂಬದಿಂದ ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದರು.
ಕಸ್ತೂರಿರಂಗನ್ ವರದಿಯಿಂದ ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗದ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೇ ನೈಸರ್ಗಿಕ ಜೀವನ ಮಟ್ಟ ಕುಸಿಯುವುದು ಎಂದ ಅವರು, ನಾವು ತೀವ್ರ ಹೋರಾಟ ರಾಜ್ಯದ್ಯಂತ ಕೈಗೊಂಡಿದ್ದೇವೆ. ರಾಜ್ಯ ಸರ್ಕಾರವು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ತೆಗೆದುಕೊಂಡ ನಿರ್ಣಯ ಶ್ಲಾಘನೀಯ ಎಂದರು.ಸಭೆಯಲ್ಲಿ ತಾಲೂಕಾಧ್ಯಕ್ಷ ಭೀಮಶಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಅಣ್ಣಪ್ಪ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ಗೌಡ, ಸುಬ್ಬ ಭಟ್ಟ, ರಾಘವೇಂದ್ರ ಕುಣಬಿ, ಮಾಚನ ಭಟ್ಟ, ಗೋಪಾಲ ಗೌಡ, ಶೇಖರ್ ನಾಯ್ಕ ಮುಂತಾದವರು ಮಾತನಾಡಿದರು. ಜಿ.ವಿ. ಭಟ್ಟ, ದಿವಾಕರ ಮರಾಠಿ, ಚಂದ್ರು ಪೂಜಾರಿ, ಅನಂತ ಸಿದ್ದಿ, ಅನಂತ ಗೌಡ ಉಪಸ್ಥಿತರಿದ್ದರು.ಜಗದೀಶಗೆ ಸಂತಾಪ: ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಅವರ ನಿಧನಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಬೃಹತ್ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.