ಶೈಕ್ಷಣಿಕ ಸಂಸ್ಥೆ, ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ಮಾಡಿದರೆ ದೂರು ದಾಖಲು-ಜಿಲ್ಲಾಧಿಕಾರಿ

| Published : Apr 06 2024, 12:47 AM IST

ಶೈಕ್ಷಣಿಕ ಸಂಸ್ಥೆ, ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ಮಾಡಿದರೆ ದೂರು ದಾಖಲು-ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಮಪತ್ರ ಸಲ್ಲಿಕೆ ಸಂದರ್ಭ ಒಳಗೊಂಡಂತೆ ಯಾವುದೇ ಪ್ರಚಾರ, ಸಭೆ-ಸಮಾರಂಭ ನಡೆಸಲು ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಹಾವೇರಿ:ನಾಮಪತ್ರ ಸಲ್ಲಿಕೆ ಸಂದರ್ಭ ಒಳಗೊಂಡಂತೆ ಯಾವುದೇ ಪ್ರಚಾರ, ರ‍್ಯಾಲಿ, ಸಭೆ-ಸಮಾರಂಭ ನಡೆಸಲು ಪೂರ್ವಾನುಮತಿ ಕಡ್ಡಾಯವಾಗಿದೆ. ೪೮ ಗಂಟೆಗಳ ಮುಂಚಿತವಾಗಿ ಸುವಿಧಾ ಪೋರ್ಟಲ್‌ನಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಅನುಮತಿ ಪಡೆದ ನಂತರವೇ ಚುನಾವಣಾ ಪ್ರಚಾರದ ಸಭೆ-ಸಮಾರಂಭ, ರ‍್ಯಾಲಿ ಇತ್ಯಾದಿ ಪ್ರಚಾರ ಕಾರ್ಯ ನಡೆಸಬೇಕು ಎಂದು ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ನಡೆಸಿದ ಅವರು, ಚುನಾವಣಾ ಪ್ರಚಾರ ಹಾಗೂ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಮಾರ್ಗಸೂಚಿಗಳನ್ನು ವಿವರಿಸಿ, ಚುನಾವಣಾ ಪ್ರಚಾರ ಕಾರ್ಯದಲ್ಲಿ ೧೮ ವರ್ಷದೊಳಗಿನ ಮಕ್ಕಳ ಬಳಕೆ, ಪ್ರಾಣಿಗಳ ಬಳಕೆ, ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದು ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ದಾಖಲಿಸಲಾಗುವುದು ಎಂದು ಹೇಳಿದರು. ವಾಹನಗಳಿಗೆ ಅನುಮತಿ ಕಡ್ಡಾಯ:ಚುನಾವಣಾ ರ‍್ಯಾಲಿ, ಪ್ರಚಾರ ಕಾರ್ಯ, ಸಮಾರಂಭಗಳಲ್ಲಿ ಭಾಗವಹಿಸುವ ದ್ವಿಚಕ್ರ ವಾಹನ ಸೇರಿದಂತೆ ಪ್ರತಿಯೊಂದು ವಾಹನಗಳಿಗೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೇ ವಾಹನಗಳನ್ನು ಬಳಕೆ ಮಾಡಿದರೆ ಮೋಟಾರು ವಾಹನ ಕಾಯಿದೆ, ಕರ್ನಾಟಕ ಪೊಲೀಸ್‌ ಕಾಯಿದೆ ಮತ್ತು ಸಂಚಾರಿ ನಿಯಮಗಳನ್ನು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು. ಇದರೊಂದಿಗೆ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು. ರೋಡ್ ಶೋಗಳಲ್ಲಿ ಭಾಗವಹಿಸುವ ಜನರ ಮತ್ತು ವಾಹನಗಳ ಲೆಕ್ಕವನ್ನು ಮೊದಲೇ ನೀಡಿ ಅನುಮತಿ ಪಡೆದುಕೊಂಡಿರಬೇಕು. ಪ್ರಚಾರ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವ ವಾಹನಗಳು ಕಾನ್ವೆ ಮಾದರಿಯಲ್ಲಿ ಚಲಿಸುವಂತಿಲ್ಲ. ಕಾನ್ವೆಯಲ್ಲಿ (ವಾಹನಗಳ ಸರದಿ ಸಾಲು) ೧೦ ವಾಹನಗಳಗಿಂತ ಅಧಿಕ ವಾಹನಗಳು ಬಳಸುವಂತಿಲ್ಲ್ಲ. ಎರಡು ಕಾನ್ವೆಗಳ ಮಧ್ಯದಲ್ಲಿ ಕನಿಷ್ಟ ೧೦೦ ಮೀ ಅಂತರವಿರಬೇಕು. ಬೈಕ್ ರ‍್ಯಾಲಿಗಳಲ್ಲಿ ಚಲಿಸುವ ಬೈಕುಗಳ ನಡುವೆ ಸಾಕಷ್ಟು ಅಂತರವಿರಬೇಕು. ಬೈಕಿನ ಮೇಲೆ ಹಾಕುವ ಪಕ್ಷದ ಧ್ವಜಗಳು ಒಂದು ಅಡಿ, ಅರ್ಧಅಡಿಯ ಒಂದು ಧ್ವಜಕ್ಕೆ ಮಾತ್ರ ಅವಕಾಶವಿದೆ. ಈ ಧ್ವಜವನ್ನು ಕಟ್ಟುವ ಕೋಲು ೩ ಫೀಟ್ ಉದ್ದದ ಅಳತೆ ಮೀರುವಂತಿಲ್ಲ ಎಂದು ತಿಳಿಸಿದರು.ಪರವಾನಗಿ ಪಡೆಯುವ ವಾಹನದ ಆರ್.ಸಿ., ವಿಮೆ, ಮಾಲಿನ್ಯ ನಿಯಂತ್ರಣ ಸೇರಿದಂತೆ ಅಗತ್ಯ ದಾಖಲೆ ಹೊಂದಿರಿಬೇಕು. ಯಾವ ವಾಹನಕ್ಕಾಗಿ ಪರವಾನಗಿ ನೀಡಲಾಗುತ್ತದೆಯೋ ಅದೇ ಸಂಖ್ಯೆಯ ವಾಹನವನ್ನು ಬಳಸಬೇಕು, ಅನುಮತಿ ನೀಡಿದ ಕಾರ್ಯಕ್ಕೆ ಹೊರತುಪಡಿಸಿ ಬೇರೆ ಕಾರ್ಯಕ್ಕೆ ವಾಹನ ಬಳಸುವಂತಿಲ್ಲ. ಯಾರ ಹೆಸರಿಗೆ ಪರಿವಾನಗಿ ನೀಡಲಾಗಿದೆ ಆ ವ್ಯಕ್ತಿ ಹೊರತುಪಡಿಸಿ ಬೇರೆಯುವರು ವಾಹನ ಬಳಸುವಂತಿಲ್ಲ. ವಾಹನದ ಮೇಲೆ ಮೂಲ ಪರವಾನಗಿ ಪತ್ರವನ್ನು ಎದ್ದು ಕಾಣುವ ರೀತಿಯಲ್ಲಿ ಪ್ರದರ್ಶನ ಮಾಡಬೇಕು. ವಾಹನ ಸಂಖ್ಯೆ ಪರವಾನಗಿ ಸಂಖ್ಯೆ ಅಭ್ಯರ್ಥಿ ಹೆಸರು ಮತ್ತು ಪಕ್ಷದ ಹೆಸರು ಕಡ್ಡಾಯವಾಗಿ ಇರಬೇಕು. ಬೇರೆ ವ್ಯಕ್ತಿಗಳು ವಾಹನ ಬಳಸಿದರೆ ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.ವಾಹನದ ಬಳಕೆಗೆ ತಗುಲಿದ ವೆಚ್ಚವನ್ನು ಪಕ್ಷದ ಅಥವಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಒಂದು ವೇಳೆ ಪರವಾನಗಿ ಪತ್ರ ನೀಡಿದ ವಾಹನವನ್ನು ಬಳಸದೇ ಇದ್ದ ಎರಡು ದಿನಗಳೊಳಗಾಗಿ ವಾಹನ ಬಳಸುತ್ತಿಲ್ಲ ಎಂಬ ಮಾಹಿತಿ ನೀಡದೆ ಹೋದಲ್ಲಿ ಅಭ್ಯರ್ಥಿಯ ಚುನಾವಣಾ ವೆಚ್ಚದ ಉದ್ದೇಶಕ್ಕಾಗಿ ಇದನ್ನು ಸೇರಿಸಲಾಗುತ್ತದೆ ಎಂದು ತಿಳಿಸಿದರು.ವಾಹನದ ಬಳಕೆಗೆ ಮೈಕ್ ಮತ್ತು ಎಲ್.ಇ.ಡಿ ವಿಡಿಯೋ ಪ್ರದರ್ಶನಕ್ಕೆ ಪೊಲೀಸ್‌ ಇಲಾಖೆಯಿಂದ ಪ್ರತ್ಯೇಕವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ರೀತಿ ಬಳಸಲಾಗುವ ಮೈಕ್ ಅಥವಾ ಲೌಡ್‌ಸ್ಪೀಕರ್‌ಗಳನ್ನು ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯ ಮಧ್ಯೆ ಬಳಸುವಂತಿಲ್ಲ. ವಾಹನದ ಮೊಡಿಫಿಕೇಷನ್‌ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಈ ಪರವಾನಗಿ ಪತ್ರವು ತನ್ನಿಂದತಾನೆ ರದ್ದಾಗುತ್ತದೆ ಮತ್ತು ವಾಹನವನ್ನು ಜಪ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮ ನಡೆಯುವ ಜಾಗೆಯ ಮಾಲೀಕರ ಪರವಾನಗಿ ಪಡೆಯಬೇಕು. ಕಾರ್ಯಕ್ರಮದಲ್ಲಿ ಕೋಮು ಅಥವಾ ದ್ವೇಷ ಭಾವನೆ ಕೆರಳಿಸುವ ಅಂಶಗಳಿಗೆ, ಜಾತಿ-ಧರ್ಮ ಆಧಾರಿತ ಚರ್ಚೆಗೆ ಅವಕಾಶವಿಲ್ಲ. ಪ್ರಶ್ನೆಗಳು ಹಾಗೂ ಚರ್ಚೆ ನೀತಿ ನಿರೂಪಣೆಗೆ ಮಾತ್ರ ಸಂಬಂಧಿಸಿದ್ದು ಇರಬೇಕು. ವೈಯಕ್ತಿಕ ಜೀವನದ ಅಂಶಗಳ ಮೇಲೆ ಪ್ರಶ್ನೆ, ಟೀಕೆ ಟಿಪ್ಪಣಿಗಳು ಇರಬಾರದು. ನಿರ್ದಿಷ್ಟ ಉತ್ತರವನ್ನು ಬಯಸುವ ಲೀಡಿಂಗ್ ಪ್ರಶ್ನೆಗಳನ್ನು ಚರ್ಚೆಯಲ್ಲಿ ಕೇಳುವಂತಿಲ್ಲ ಎಂದರು.

ಪಕ್ಷದ ತಾತ್ಕಾಲಿಕ ಕಚೇರಿಗಾಗಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಜಾಗೆ ಅತಿಕ್ರಮಿಸುವಂತಿಲ್ಲ. ಯಾವುದೇ ಧಾರ್ಮಿಕ ಸ್ಥಳದಲ್ಲಿ, ಸರ್ಕಾರಿ ಕಟ್ಟಡದಲ್ಲಿ ಮತ್ತು ಶಾಲೆ-ಕಾಲೇಜುಗಳಲ್ಲಿ ಸ್ಥಾಪಿಸಲು ಅವಕಾಶವಿಲ್ಲ. ಗುರುತಿಸಲಾದ ಮತಗಟ್ಟೆಗಳಿಂದ ೨೦೦ ಮೀ. ವ್ಯಾಪ್ತಿಯೊಳಗೆ ಪಕ್ಷದ ಕಚೇರಿ ಇರಬಾರದು. ತಾತ್ಕಾಲಿಕ ಕಚೇರಿಯು ಬಾಡಿಗೆ ಕಟ್ಟಡದಲ್ಲಿ ಸಂಬಂಧಿಸಿದ ಕಟ್ಟಡದ ಮಾಲೀಕರ ಪರವಾನಗಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಪಕ್ಷದ ಕಚೇರಿಯ ಮೇಲೆ ೪*೮ ಫೀಟ್ ಗಾತ್ರದ ಒಂದು ಧ್ವಜವನ್ನು ಮಾತ್ರ ಪ್ರದರ್ಶಿಸಲು ಅವಕಾಶವಿದೆ. ತಾತ್ಕಾಲಿಕ ಕಚೇರಿಗೆ ತಗಲುವ ವೆಚ್ಚವನ್ನು ಸಂಬಂಧಿಸಿದ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ ಸಹಾಯವಾಣಿ ಸಂಖ್ಯೆಗಳಿಗೆ ಕರೆಮಾಡಿ ದೂರು ನೀಡಬಹುದು. ಈಗಾಗಲೇ ಸಹಾಯವಾಣಿ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿದೆ ಎಂದರು.

ಚುನಾವಣಾ ಪ್ರಚಾರಕ್ಕಾಗಿ ಹೆಲಿಕ್ಯಾಪ್ಟರ್‌ನಲ್ಲಿ ಸ್ಟಾರ್ ಕ್ಯಾಂಪೇನರ್ ಆಗಮಿಸಿದರೆ ಅದರ ವೆಚ್ಚವನ್ನು ಪಕ್ಷಕ್ಕೆ ಹಾಕಲಾಗುವುದು. ಹೆಲಿಕ್ಯಾಪ್ಟರ್‌ನಲ್ಲಿ ಸ್ಟಾರ್ ಕ್ಯಾಂಪೇನರ್ ಜೊತೆಗೆ ಅಭ್ಯರ್ಥಿ ಪ್ರಯಾಣಿಸಿದರೆ ಶೇ.೫೦ರಷ್ಟು ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಭರಿಸಲಾಗುವುದು. ಹೆಲಿಕ್ಯಾಪ್ಟರ್ ಇಳಿಯಲು ವ್ಯವಸ್ಥೆ, ಸುರಕ್ಷತಾ ಕ್ರಮಗಳು, ಭದ್ರತಾ ವ್ಯವಸ್ಥೆ ಆಯಾ ಪಕ್ಷದ ಅಭ್ಯರ್ಥಿಯ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.ಮಾಸ್ಟರ್ ಟ್ರೇನರ್ ಅರವಿಂದ ಐರಣಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಚುನಾವಣಾ ಮಾದರಿ ನೀತಿ ಸಂಹಿತೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಹಾಗೂ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ಶಿರಸ್ತೇದಾರ ಎಂ.ಜಿ. ಚಿತ್ತೆಖಾನ್ ಇತರರು ಇದ್ದರು.