ಕೇಬಲ್ ಪ್ರಸಾರ, ಗುಣಮಟ್ಟದಲ್ಲಿ ಲೋಪ ಕಂಡುಬಂದಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

| Published : Feb 01 2024, 02:07 AM IST

ಕೇಬಲ್ ಪ್ರಸಾರ, ಗುಣಮಟ್ಟದಲ್ಲಿ ಲೋಪ ಕಂಡುಬಂದಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮಗಳ ಗುಣಮಟ್ಟ ಹಾಗೂ ಜಾಹೀರಾತು ಪ್ರಸಾರ ವಿಷಯಗಳಲ್ಲಿ ಯಾವುದಾದರೂ ಆಕ್ಷೇಪಗಳಿದ್ದರೆ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶವಿದೆ.

ಕೇಬಲ್ ಟೆಲಿವಿಷನ್ ಜಿಲ್ಲಾ ನಿರ್ವಹಣಾ ಸಮಿತಿಯ ಸಭೆ

ಕನ್ನಡಪ್ರಭ ವಾರ್ತೆ ಹಾವೇರಿ

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಗುಣಮಟ್ಟ ಹಾಗೂ ಜಾಹೀರಾತು ಪ್ರಸಾರ ವಿಷಯಗಳಲ್ಲಿ ಯಾವುದಾದರೂ ಆಕ್ಷೇಪಗಳಿದ್ದರೆ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕೇಬಲ್ ಟೆಲವಿಷನ್ ಜಿಲ್ಲಾ ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಬಲ್ ಟೆಲವಿಷನ್ ನೆಟ್‌ವರ್ಕ್ ಅಧಿನಿಯಮ ೧೯೯೫ರ ಅನುಸಾರ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಯಾವುದೇ ಸಿಗ್ನಲ್‌ಗಳ ದೋಷ, ಕಾರ್ಯಕ್ರಮ ಗುಣಮಟ್ಟದ ಬಗ್ಗೆ ವೀಕ್ಷಕರ ಆಕ್ಷೇಪಗಳು, ಜಾಹೀರಾತುಗಳಲ್ಲಿ ಬಿತ್ತರವಾಗುವ ಸಂದೇಶ, ಪ್ರಸಾರವಾಗುವ ವಿಡಿಯೋ ಹಾಗೂ ಚಿತ್ರಗಳ ಬಗ್ಗೆ ಆಕ್ಷೇಪಗಳಿದ್ದರೆ ದೂರು ಸಲ್ಲಿಸಬಹುದಾಗಿದೆ.

ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಕಾರ್ಯಕ್ರಮಗಳ ಪ್ರಸಾರವಾದರೆ, ಮಹಿಳೆಯರು ಮತ್ತು ಮಕ್ಕಳ ಬಗೆಗಿನ ವಿಕೃತವಾದ ಕಾರ್ಯಕ್ರಮಗಳ ಪ್ರಸಾರ, ಅಶ್ಲೀಲ ಚಿತ್ರಗಳನ್ನು ಸ್ಥಳೀಯ ಕೇಬಲ್‌ಗಳಲ್ಲಿ ಪ್ರಸಾರವಾದ ಬಗ್ಗೆ ಸಾರ್ವಜನಿಕ ದೂರುಗಳನ್ನು ಕೇಬಲ್ ಟೆಲವಿಷನ್ ಜಿಲ್ಲಾ ನಿರ್ವಹಣಾ ಸಮಿತಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಿದೆ. ಈ ಕುರಿತಂತೆ ವಾರ್ತಾ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದು ಎಂದರು.

ಕೇಬಲ್ ಪ್ರಸಾರದಲ್ಲಿ ಸಿಗ್ನಲ್‌ಗಳ ಲೋಪ, ಫ್ರೀ ಏರ್‌ಟು ಚಾನಲ್ ಉಚಿತ ಪ್ರಸಾರ ಮಾಡದಿದ್ದರೆ ದೂರು ಸಲ್ಲಿಸಬಹುದಾಗಿದೆ. ಕೇಬಲ್ ಆಪರೇಟರ್‌ಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಕಾರ್ಯಕ್ರಮ ಪ್ರಸಾರದ ವಹಿಯನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ಸಮಿತಿಯ ಸದಸ್ಯ ಕಾರ್ಯದರ್ಶಿ ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಸ್ವಾಗತಿಸಿ, ಕೇಬಲ್ ನೆಟ್‌ವರ್ಕ್ ಅಧಿನಿಯಮದ ಕುರಿತಂತೆ ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಹಾವೇರಿ ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ, ಮನೋವೈದ್ಯ ಡಾ. ವಿಜಯಕುಮಾರ ಬಳಿಗಾರ, ಪರಿಮಳಾ ಜೈನ್, ಶಿವಲಿಂಗೇಶ್ವರ ಮಹಿಳಾ ಕಾಲೇಜು ಪ್ರಾಚಾರ್ಯೆ ಸವಿತಾ ಹಿರೇಮಠ, ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಅರವಿಂದ ಐರಣಿ ಇತರರು ಇದ್ದರು.