ಪುಟ್ಟ 2 ಮಕ್ಕಳ ತಾಯಿಯ ದಾರುಣ ಸಾವಿಗೆ ಕಾರಣವಾದ ರಾಟ್ ವೀಲರ್ ನಾಯಿಗಳ ಅಸಲಿ ಮಾಲೀಕರನ್ನು ಪತ್ತೆ ಮಾಡಿ, ಎಫ್ಐಆರ್ ದಾಖಲಿಸುವಂತೆ ಗ್ರಾಮಾಂತರ ಪೊಲೀಸರಿಗೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.
- ನಾಯಿಗಳಿಗೆ ಬಲಿಯಾದ ಅನಿತಾ ಅಂತಿಮ ದರ್ಶನ ಪಡೆದ ಮಾಯಕೊಂಡ ಶಾಸಕ ಬಸವಂತಪ್ಪ
- - -- ಮುಖ್ಯಮಂತ್ರಿ ಜತೆಗೂ ಚರ್ಚೆ ಭರವಸೆ । ನಾಲ್ಕೂ ಮಕ್ಕಳಿಗೆ ಮೊರಾರ್ಜಿ ಶಾಲೆಯಲ್ಲಿ ವಿದ್ಯಾಭ್ಯಾಸ
- ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಲು ಡಿಸಿ, ಜಿಪಂ ಸಿಇಒಗೆ ಸೂಚನೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆಪುಟ್ಟ 2 ಮಕ್ಕಳ ತಾಯಿಯ ದಾರುಣ ಸಾವಿಗೆ ಕಾರಣವಾದ ರಾಟ್ ವೀಲರ್ ನಾಯಿಗಳ ಅಸಲಿ ಮಾಲೀಕರನ್ನು ಪತ್ತೆ ಮಾಡಿ, ಎಫ್ಐಆರ್ ದಾಖಲಿಸುವಂತೆ ಗ್ರಾಮಾಂತರ ಪೊಲೀಸರಿಗೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.
ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಾಪೂಜಿ ಬಡಾವಣೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿದ್ದ ಶಾಸಕ ಬಸವಂತಪ್ಪ, ಗುರುವಾರ ತಡರಾತ್ರಿ ಹೊನ್ನೂರು ಗೊಲ್ಲರಹಟ್ಟಿ ಬಳಿ ಜೋಡಿ ರಾಟ್ ವೀಲರ್ ನಾಯಿಗಳ ದಾಳಿಗೆ ಒಳಗಾಗಿ ಮೃತಪಟ್ಟ ಅನಿತಾ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ, ಅಂತಿಮ ದರ್ಶನ ಪಡೆದರು. ಬಳಿಕ ಮೃತಳ ಮಕ್ಕಳು, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅನಿತಾ ದುರಂತ ಸಾವಿಗೆ ಕಾರಣವಾದ ನಾಯಿಗಳ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ಅವರಿಗೆ ತಾಕೀತು ಮಾಡಿದರು.ನಗರ, ಗ್ರಾಮೀಣ ಪ್ರದೇಶಗಳೆನ್ನದೇ ನಾಯಿಗಳ ದಾಳಿ, ನಾಯಿ ಕಡಿತದಿಂದ ಜನಸಾಮಾನ್ಯರು, ಅಮಾಯಕರು ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳ ಸಾವಿನ ಪ್ರಕರಣಗಳೂ ವರದಿಯಾಗುತ್ತಿವೆ. ಇಂತಹ ಅಪಾಯಕಾರಿ ನಾಯಿಗಳ ವಿರುದ್ಧ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿನಾಯಿಗಳ ಸಂತಾನೋತ್ಪತ್ತಿ ಆಗದಂತೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಎಂದರು.
ಮಾಲೀಕರು ನಾಯಿಗಳಿಗೆ ವಯಸ್ಸಾದ ಮೇಲೆ ಅವುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಬಾರದು. ಅದರಲ್ಲೂ ರಾಟ್ ವೀಲರ್ ನಾಯಿಗಳು ಅತ್ಯಂತ ಅಪಾಯಕಾರಿ ಎಂದೇ ಗುರುತಿಸಲ್ಪಟ್ಟಿವೆ. ಇಂತಹ ನಾಯಿಗಳನ್ನು ಸಾಕಿದ ಮೇಲೆ ಅವುಗಳ ಮಾಲೀಕರು ಬೇಜವಾಬ್ದಾರಿಯಿಂದ ನಿರ್ಜನ ಪ್ರದೇಶವೆಂದು ತಂದುಬಿಟ್ಟು ಕೈ ತೊಳೆದುಕೊಳ್ಳಬಾರದು. ರಾಟ್ ವೀಲರ್ ನಾಯಿಗಳ ದಾಳಿಯಿಂದ 2 ಪುಟ್ಟ ಮಕ್ಕಳ ತಾಯಿ ಸಾವನ್ನಪ್ಪಿದ್ದಾರೆ. ಈ ಮಕ್ಕಳಿಗೆ ಈಗ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಸಿಪಿಐ ಅಣ್ಣಯ್ಯ, ಗ್ರಾಮಸ್ಥರು, ಮೃತಳ ಬಂಧು-ಬಳಗ, ಗ್ರಾಮಸ್ಥರು ಇದ್ದರು.
- - -(ಕೋಟ್) * ನಾಲ್ಕೂ ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೆಲ ವರ್ಷಗಳ ಹಿಂದಷ್ಟೇ ಗಂಡನನ್ನು ಕಳೆದುಕೊಂಡಿದ್ದ ಅನಿತಾ ಕೂಲಿ ಮಾಡಿಕೊಂಡಿದ್ದರು. ಅನಿತಾ ಇಲ್ಲದೇ ಅನಾಥರಾದ ಆಕೆಯ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ಸೂಕ್ತ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಸೂಚಿಸುತ್ತೇನೆ. ಮುಖ್ಯಮಂತ್ರಿ ಬಳಿಯೂ ಈ ಬಗ್ಗೆ ಚರ್ಚಿಸಿ, ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೃತಳ ಮಕ್ಕಳಾದ ನಾಗವೇಣಿ, ಅನುಷಾ, ರಾಮಚರಣ ಹಾಗೂ ಸಾಕು ಮಗಳು ಐಶ್ವರ್ಯಾಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.
- - -(ಬಾಕ್ಸ್) * (ಎಡಿಟೆಡ್) ಶ್ವಾನಗಳ ಮಾಲೀಕರಿಗೆ ಶೋಧ: ಪ್ರಕಟಣೆ ಹೊರಡಿಸಿದ ಪೊಲೀಸರು
ದಾವಣಗೆರೆ: ಮಹಿಳೆಯನ್ನು ಭೀಕರವಾಗಿ ಕಚ್ಚಿ, ತಿಂದು ಆಕೆಯನ್ನು ಕೊಂದ ಜೋಡಿ ರಾಟ್ ವೀಲರ್ ನಾಯಿಗಳ ಅಸಲಿ ಮಾಲೀಕರಿಗಾಗಿ ಇದೀಗ ದಾವಣಗೆರೆ ಗ್ರಾಮಾಂತರ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.ರಾಟ್ ವೀಲರ್ ನಾಯಿಗಳ ಫೋಟೋಗಳ ಸಮೇತ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಈ ನಾಯಿಗಳ ಮಾಲೀಕರ ಬಗ್ಗೆ ಮಾಹಿತಿ ಇದ್ದಲ್ಲಿ, ಎಲ್ಲಿದ್ದಾರೆಂಬ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ಮಾಹಿತಿ, ಸುಳಿವು ನೀಡುವಂತೆ ಗ್ರಾಮಾಂತರ ಪೊಲೀಸರು ಮನವಿ ಮಾಡಿದ್ದಾರೆ.ಓರ್ವ ಸಾಕುಮಗಳು ಸೇರಿದಂತೆ ನಾಲ್ವರು ಪುಟ್ಟ ಮಕ್ಕಳ ತಾಯಿ ಅನಿತಾ ಅವರು ಗಂಡ ಇಲ್ಲದಿದ್ದರೂ ಮಕ್ಕಳನ್ನು ಆರೈಕೆ ಮಾಡಿಕೊಂಡಿದ್ದರು. ಗುರುವಾರ ರಾತ್ರಿ ಹೊನ್ನೂರು ಗೊಲ್ಲರಹಟ್ಟಿ ಬಳಿ ನಿರ್ಜನ ಪ್ರದೇಶದಲ್ಲಿ ಜೋಡಿ ರಾಟ್ ವೀಲರ್ ನಾಯಿಗಳು ದಾಳಿ ಮಾಡಿ, ಅವರ ಸಾವಿಗೆ ಕಾರಣವಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದೀಗ ರಾಟ್ ವೀಲರ್ ನಾಯಿಗಳ ಮಾಲೀಕರ ಶೋಧಕ್ಕೆ ಮುಂದಾಗಿದ್ದಾರೆ.- - -(ಸಾಂದರ್ಭಿಕ ಚಿತ್ರ)- - -
-6ಕೆಡಿವಿಜಿ2.ಜೆಪಿಜಿ:ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಮೃತ ಅನಿತಾ ಅವರ ಅಂತಿಮ ಪಡೆದು, ನಾಯಿಗಳ ಮಾಲೀಕರ ಪತ್ತೆಹಚ್ಚಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು. -6ಕೆಡಿವಿಜಿ3:
ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ನಾಯಿ ದಾಳಿಗೆ ಒಳಗಾಗಿ ಮೃತಪಟ್ಟ ಅನಿತಾ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.