ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕುಗಳ 74 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಸಿ ರೈತ ಸಮುದಾಯವನ್ನು ಕೂಡಲೇ ಸಂಕಷ್ಟದಿಂದ ಪಾರು ಮಾಡಬೇಕು. ಹಲವಾರು ವರ್ಷಗಳಿಂದ ರೈತ ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪರಿಣಾಮ ರೈತರು ಪ್ರತಿಭಟನೆ ಹಾದಿ ಅನಿವಾರ್ಯವಾಗಿ ಹಿಡಿಯಬೇಕಾಗಿದೆ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಹೇಳಿದ್ದಾರೆ.

- ರೈತ ಸಂಘ, ಹಸಿರು ಸೇನೆ ಪ್ರತಿಭಟನೆ, ಎಸಿ ಕಚೇರಿ ಮುತ್ತಿಗೆಯಲ್ಲಿ ಎಂ.ಪಿ.ಕರಿಬಸಪ್ಪಗೌಡ ಆಗ್ರಹ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕುಗಳ 74 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಸಿ ರೈತ ಸಮುದಾಯವನ್ನು ಕೂಡಲೇ ಸಂಕಷ್ಟದಿಂದ ಪಾರು ಮಾಡಬೇಕು. ಹಲವಾರು ವರ್ಷಗಳಿಂದ ರೈತ ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪರಿಣಾಮ ರೈತರು ಪ್ರತಿಭಟನೆ ಹಾದಿ ಅನಿವಾರ್ಯವಾಗಿ ಹಿಡಿಯಬೇಕಾಗಿದೆ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಹೇಳಿದರು.

ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅವ‍ಳಿ ತಾಲೂಕುಗಳ 74 ಕೆರೆಗಳಿಗೆ ಏತನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಪ್ರಾರಂಭವಾಗಿ 3 ವರ್ಷ ಪೂರ್ಣಗೊಂಡಿದ್ದರೂ, ಇಂದಿನವರೆಗೆ ಕಾಮಗಾರಿ ಪ್ರಾರಂಭಿಸಿಲ್ಲ. ಪೂರ್ಣಗೊಂಡ ಯೋಜನೆ ಆರಂಭಿಸದೇ ಅಧಿಕಾರಿಗಳು ಮೀನ ಮೇಷ ಏಣಿಸುತ್ತಿದ್ದಾರೆ. ಈ ಯೋಜನೆಗೆ ವಿದ್ಯುತ್ ಸಂಪರ್ಕವನ್ನು ಕೂಡಲೇ ನೀಡಿ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಅವಳಿ ತಾಲೂಕಿನ ರೈತರ ಸಂಕಷ್ಟ ಕೂಡಲೇ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.

ಅವಳಿ ತಾಲೂಕುಗಳ ನೂರಾರು ರೈತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರ‍ವಣಿಗೆಯಲ್ಲಿ ಬಂದು ಎ.ಸಿ. ಕಚೇರಿ ಮುಂದೆ ಕುಳಿತು ಸ್ಥಳಕ್ಕೆ ಶಾಸಕರು, ಜಿಲ್ಲಾಧಿಕಾರಿ, ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟುಹಿಡಿದು ಕುಳಿತರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಬಸಪ್ಪ ಮಾತನಾಡಿ, ರೈತರಿಗೆ ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ. ಹದವಾಗಿ ಮಳೆ ಬಂದು ಬೆಳೆಯಾದರೆ ಬೆಳೆಗಳ ದರ ಕುಸಿತ ಸಮಸ್ಯೆ. ಹೀಗೆ ಪ್ರತಿನಿತ್ಯ ರೈತರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುವಂತಾಗಿದೆ ಎಂದು ಬೇಸರಿಸಿದರು.

ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಡಿ.ಜಿ.ಶಾಂತನಗೌಡ, ತುಂಗಾ ಮೇಲ್ದಂಡೆ ಯೋಜನೆ ಶಿವಮೊಗ್ಗ ವಿಭಾಗದ ಕಾರ್ಯಾಪಾಲಕ ಎಂಜಿನಿಯರ್ ಕೃಷ್ಣಪ್ರಸಾದ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಪ್ರಸಾದ್ ಅವರು ರೈತ ಮುಖಂಡರೊಂದಿಗೆ ಕೆಲ ಸಮಯ ಚರ್ಚ ನಡೆಸಿ ವಿಳಂಬಕ್ಕೆ ಕಾರಣಗಳ ಸಹಿತ ಸಮಜಾಯಿಷಿ ನೀಡಿದರು.

ನ್ಯಾಮತಿ ತಹಸೀಲ್ದಾರ್ ಗ್ರೇಡ್-2 ಗೋವಿಂದಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಸುನಿಲ್ ಕುಮಾರ್, ರೈತ ಮುಖಂಡರಾದ ಎಚ್.ಕಡದಕಟ್ಟೆಯ ಎಂ.ಎಸ್. ಜಗದೀಶ್, ಬೆಳಗುತ್ತಿಯ ಉಮೇಶ್ ಬಸವರಾಜಪ್ಪ. ಹಿರೇಮಠದ ಬಸವರಾಜಪ್ಪ, ನ್ಯಾಮತಿ ಮಲ್ಲಿಕಾರ್ಜುನ ಸೇರಿದಂತೆ ಅನೇಕ ರೈತ ಮುಖಂಡರು ಮಾತನಾಡಿದರು.

ಶಾಸಕರ ಭರವಸೆ ಮೇರೆಗೆ ರೈತರು ಧರಣೆ ಹಿಂಪಡೆದರು. ಅವಳಿ ತಾಲೂಕಿನ ವಿವಿಧ ಹಳ್ಳಿಗಳಿಂದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - -

(ಬಾಕ್ಸ್‌)

* ಸೆ.15ರೊಳಗೆ ಕೆರೆಗಳಿಗೆ ನೀರು: ಶಾಂತನಗೌಡ ಭರವಸೆ ಈ ವೇಳೆ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಅ‍ವಳಿ ತಾಲೂಕುಗಳ ರೈತರ ಸಮಸ್ಯೆಗಳನ್ನು ಇಂಚಿಂಚೂ ಅರಿವಿದೆ. ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿಯಲ್ಲಿ ಈಗಾಗಲೇ ಪೈಪ್ ಲೈನ್‌ ಆಗಿದೆ. ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾಗಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡದೇ ಸೆ.15ರೊಳಗೆ ಸರ್ಕಾರ ಮತ್ತು ಸಚಿವರಿಗೆ ಒತ್ತಾಯ ಮಾಡಿ 74 ಕೆರೆಗಳಿಗೆ ಏತನೀರಾವರಿ ಮೂಲಕ ನೀರು ತುಂಬಿಸುವ ಕೆಲಸ ಮಾಡಲಾಗುವುದು. ಈ ಬಗ್ಗೆ ರೈತರಲ್ಲಿ ಅನುಮಾನ ಬೇಡ. ಈ ಕೆಲಸವನ್ನು ತಪ್ಪದೇ ಮಾಡಲಾಗುವುದು ಎಂಬ ಭರವಸೆ ನೀಡಿದರು.

- - -

-27ಎಚ್.ಎಲ್.ಐ3:

74 ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಎಸಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.