ತಾರಾನಾಥ ಕಾಲೇಜಿನ ಖಾಲಿ ಹುದ್ದೆ ಭರ್ತಿ ಮಾಡಿ: ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹ

| Published : Aug 14 2025, 01:00 AM IST

ತಾರಾನಾಥ ಕಾಲೇಜಿನ ಖಾಲಿ ಹುದ್ದೆ ಭರ್ತಿ ಮಾಡಿ: ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ತಕ್ಷಣವೇ ಖಾಲಿ ಹುದ್ದೆ ಭರ್ತಿ ಮಾಡಿ, ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಆಗದಂತೆ ತುರ್ತು ಕ್ರಮಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿಯ ತಾರಾನಾಥ ಆಯುರ್ವೇದ ಕಾಲೇಜಿನಲ್ಲಿ ಬೋಧಕರ ಕೊರತೆಯ ಕಾರಣ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಭಾರತೀಯ ವೈದ್ಯಕೀಯ ರಾಷ್ಟ್ರೀಯ ಆಯೋಗವು ಕಡಿತ ಮಾಡಿದ್ದು, ಸರ್ಕಾರ ತಕ್ಷಣವೇ ಖಾಲಿ ಹುದ್ದೆ ಭರ್ತಿ ಮಾಡಿ, ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಆಗದಂತೆ ತುರ್ತು ಕ್ರಮಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.

ವೈ.ಎಂ. ಸತೀಶ್ ಮೇಲ್ಮನೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಬಳ್ಳಾರಿಯ ತಾರಾನಾಥ ಆಯುರ್ವೇದ ಮಹಾವಿದ್ಯಾಲಯ ವಿದ್ಯಾರ್ಥಿಗಳ ಪ್ರವೇಶಾತಿ ಸೀಟನ್ನು ಹೆಚ್ಚಳ ಮಾಡಲು ಕೋರಿ ಭಾರತೀಯ ವೈದ್ಯಕೀಯ ರಾಷ್ಟ್ರೀಯ ಆಯೋಗದ ಅಧಿನಿಯಮ ಸಂಖ್ಯೆ 26(ಡಿ) ಅಡಿಯಲ್ಲಿ ತಕ್ಷಣವೇ ಮೇಲ್ಮನವಿ ಸಲ್ಲಿಸಲಾಗಿದೆ.

ಅಲ್ಲದೇ, ತಾರಾನಾಥ ಆಯುರ್ವೇದ ಮಹಾವಿದ್ಯಾಲಯದಲ್ಲಿಯ ಕೊರತೆಗಳನ್ನು ತ್ವರಿತವಾಗಿ ನಿವಾರಿಸುವ ಕುರಿತು ಭಾರತೀಯ ವೈದ್ಯಕೀಯ ರಾಷ್ಟ್ರೀಯ ಆಯೋಗಕ್ಕೆ ನೋಟರೈಸ್ಡ್ ಅಫಿಡವಿಟ್ ಸಲ್ಲಿಸಲಾಗಿದೆ. ಭಾರತೀಯ ವೈದ್ಯಕೀಯ ರಾಷ್ಟ್ರೀಯ ಆಯೋಗವು ಸರ್ಕಾರದ ಮನವಿ ಪುರಸ್ಕರಿಸಿ, ಪ್ರಸಕ್ತ 2025-26ರ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಯಥಾವತ್ತಾಗಿ 60ಕ್ಕೆ ಮಿತಿಗೊಳಿಸಿ ಆ. 4, 2025ರಂದು ಆದೇಶ ಜಾರಿ ಮಾಡಿದೆ ಎಂದು ಉತ್ತರಿಸಿದರು.

ಬುಡಾದಿಂದ ಮಹಾನಗರ ಪಾಲಿಕೆಗೆ 32 ಲೇಔಟ್‍ಗಳ ಹಸ್ತಾಂತರಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಳ್ಳಾರಿ ಮಹಾನಗರ ಪಾಲಿಕೆಗೆ 2023ರ ನವೆಂಬರ್‌ನಿಂದ ಈವರೆಗೆ 32 ಲೇಔಟ್‍ಗಳನ್ನು ಹಸ್ತಾಂತರ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಎಸ್. ಸುರೇಶ್ ಮೇಲ್ಮನೆಯಲ್ಲಿ ತಿಳಿಸಿದರು.

ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಹಾಗೂ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ , ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ಅನುಮೋದಿತ ಬಡಾವಣೆಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹಸ್ತಾಂತರ ಮಾಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಸಚಿವ ಭೈರತಿ ಸುರೇಶ್ ಅವರು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರವೇ, ಬಡಾವಣೆಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾಲಿಕೆಗೆ ಹಸ್ತಾಂತರ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯೇ ನಿರ್ವಹಣೆ ಮಾಡಿ, ಹೊಸ ಸಂಪರ್ಕಗಳನ್ನು ನೀಡುತ್ತದೆ ಎಂದರು.