ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ಸರ್ಕಾರ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ರಾಜೀನಾಮೆ, ಮರಣ ಹೊಂದಿರುವುದರಿಂದ ಖಾಲಿಯಾಗಿರುವ ಏಳು ಸಾವಿರ ಶಿಕ್ಷಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡದೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಆರೋಪಿಸಿದರು.ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ಉಚ್ಛ ನ್ಯಾಯಾಲಯವೂ ಕೂಡಾ ತಕ್ಷಣ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ನೇಮಕ ಮಾಡಲು ಕ್ರಮ ವಹಿಸುವಂತೆ ಆದೇಶಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳು ಹೊಸದಾಗಿ ಸೃಸ್ಟಿಯಾಗಿರುವ ಹುದ್ದೆಗಳಲ್ಲ. ಈಗಾಗಲೇ ಅನುದಾನಕ್ಕೆ ಒಳಪಟ್ಟಿರುವ ಹದ್ದೆಗಳಾಗಿವೆ. ಇಲಾಖೆಯ ಬಜೆಟ್‌ನಲ್ಲಿ ಹೊಸದಾಗಿ ಸೇರಬೇಕಾಗಿಲ್ಲ ಹಾಗೂ ಈ ಹುದ್ದೆಗಳು ಆರ್ಥಿಕ ಮಿತವ್ಯಯಕ್ಕೆ ಒಳಪಡುವುದಿಲ್ಲ ಎಂದು ಹೇಳಿದರು. 14 ನೇ ವರ್ಷದವರೆವಿಗೂ ಪ್ರತಿಯೊಂದು ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಆದರೆ ಸರ್ಕಾರ ಸತತ 8 ವರ್ಷಗಳಿಂದ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ವಹಿಸದೆ ಇರುವುದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯದೆ ಅನ್ಯಾಯವಾಗಿದೆ. ಈ ಕೂಡಲೇ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲು ನ್ಯಾಯಾಲಯ ಆದೇಶಿಸಿದೆ. ಘನ ಉಚ್ಛ ನ್ಯಾಯಾಲಯದ ಈ ಆದೇಶದ ವಿರುದ್ಧ ಸರ್ಕಾರ ಡಿವಿಜನ್ ಬೇಂಚಿಗೆ ಮೇಲ್ಮನವಿ ಸಲ್ಲಿಸಿರುತ್ತದೆ. ಇದು ಸರ್ಕಾರ ಬಡ ಗ್ರಾಮೀಣ ಮಕ್ಕಳ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ವಹಿಸುತ್ತದೆ ಎಂದು ಗೊತ್ತಾಗುತ್ತದೆ ಎಂದರು.ಈಗಾಗಲೇ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದೆ. ಆದರೆ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಉಪಾಧ್ಯಾಯರಿಲ್ಲದೆ ಈಗಾಗಲೇ ಅನೇಕ ಶಾಲೆಗಳು ಮುಚ್ಚಿವೆ. ಗ್ರಾಮೀಣ ಬಡ ಹೆಣ್ಣು ಮಕ್ಕಳು ಹತ್ತಾರು ಮೈಲಿ ದೂರದ ಶಾಲೆಗಳಿಗೆ ದಾಖಲಾಗಲು ತೊಂದರೆಯಾದ ಕಾರಣ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಖಾಲಿ ಇರುವ ಹುದ್ದೆಗಳನ್ನು ತುಂಬಲು ಮೀಸಲಾತಿಯಂತೆ ಪ್ರಕಟಣೆ ಹೊರಡಿಸಲು ಒತ್ತಾಯಿಸಲಾಯಿತು. ಘನ ಸುಪ್ರೀಂ ಕೋರ್ಟ್ ಆದೇಶದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸಲು ಅನುಮತಿ ನೀಡುವಂತೆ ಶಿಕ್ಷಣ ಇಲಾಖೆಯನ್ನು ಒಕ್ಕೂಟ ಮನವಿ ಮಾಡಿತು.ಒಕ್ಕೂಟದ ಗೌರವಾಧ್ಯಕ್ಷ ಎಂ.ಬಸವಯ್ಯ, ಕಾರ್ಯದರ್ಶಿ ದೇವರಾಜಯ್ಯ ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.