ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ನಮಗೆ ಬೇಕಿರುವುದು ಮಂತ್ರಿ ಗಿರಿ ಅಲ್ಲ. ಭದ್ರಾ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಮೊದಲ ಆದ್ಯತೆ ಸಚಿವ ಸ್ಥಾನ ಶಾಶ್ವತವಲ್ಲ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದ ಯಲ್ಲಮ್ಮ ಎಸ್ಟೇಟ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರದ ಜನರು ಐದು ವರ್ಷಕ್ಕೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ.ಸಚಿವ ಸ್ಥಾನ ಸಿಗಲಿಲ್ಲವೆಂದು ಆ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನಮಗೆ ಬೇಕಿರುವುದು ಮಂತ್ರಿಗಿರಿ ಅಲ್ಲ. ಬರದ ನಾಡಿಗೆ ಭದ್ರೆಯನ್ನು ಹರಿಸಿ ಶಾಶ್ವತ ನೀರಾವರಿಯನ್ನಾಗಿಸುವುದು ನನ್ನ ಮೊದಲ ಆದ್ಯತೆ. ಮಂತ್ರಿ ಸ್ಥಾನ ಸಿಗುತ್ತೆ ಅಂತ ನಾನು ಎಲ್ಲಿಯೂ ಹೇಳಿಲ್ಲ. ಕ್ಷೇತ್ರದ ಜನರು ಅಭಿಮಾನಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ನಾನಿಲ್ಲದೆ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಸ್ವಕ್ಷೇತ್ರಕ್ಕೆ ಬಂದೆ. ಜನತೆ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರು. ಜನತೆ ಕೊಟ್ಟ ತೀರ್ಪನ್ನು ಯಾರೂ ಕಸಿದು ಕೊಳ್ಳಲು ಆಗಲ್ಲ. ಶಾಸಕರಾಗಿ ಅಭಿವೃದ್ಧಿ ಮಾಡುವುದಕ್ಕಿಂತ ಸಚಿವರಾಗಿ ಮಾಡಬಹುದು ಎನ್ನುವ ಆಶಾಭಾವನೆ ಇತ್ತು. ಕ್ಷೇತ್ರದಲ್ಲಿ ಈಗಾಗಲೇ 50% ರಷ್ಟು ಕೆಲವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಡುವ ಭರವಸೆ ಇದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ತಿಳಿಸಿದರು.


ಮಂತ್ರಿ ಸ್ಥಾನ ನೀಡಲಿಲ್ಲ ಎಂದು ಹೈಕಮಾಂಡ್ ದೂಷಿಸುವುದು ಸಲ್ಲದು. ಮಂತ್ರಿ ಸ್ಥಾನ ಸಿಗಲಿಲ್ಲವೆಂದು ನಾನು ನೋವು ಪಟ್ಟಿಲ್ಲ. ನೀವು ಪಡಬೇಡಿ. ಧರ್ಮವನ್ನು ಪಾಲಿಸಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ಅಗೌರವ ತೋರುವ ವ್ಯಕ್ತಿ ನಾನಲ್ಲ. ದೇವರು ನನ್ನ ಕೇಳಿದರೆ ಜನರ ಮಧ್ಯೆ ಇರುವ ಆಶೀರ್ವಾದ ಕೊಡು ಎನ್ನುತ್ತೇನೆ. ರಾಜ್ಯದಲ್ಲಿ ನನ್ನಂತೆಯೇ ಅನೇಕರಿಗೆ ಅನ್ಯಾಯವಾಗಿದೆ. ಯಾವ ಉದ್ದೇಶಕ್ಕೆ ಈ ರೀತಿ ಆಯಿತು ಎನ್ನುವುದು ಗೊತ್ತಿಲ್ಲ. ಅದನ್ನೆಲ್ಲ ನೆನಸಿಕೊಂಡು ಬೇಸರ ಪಡುವುದು ಬೇಡ ಎಂದು ಭಾವುಕರಾಗಿ ನುಡಿದರು.

ಕೆಲವರು ದೆಹಲಿಗೆ ಹೋಗಬೇಕಿತ್ತು ಎಂದು ಹೇಳುತ್ತಿದ್ದರು. ನಿಮ್ಮ ಕಾಲಿಗೆ ಬೇಕಾದ್ರೆ ಬೀಳ್ತೀನಿ, ಆದರೆ ಯಾರ ಮನೆಯ ಬಾಗಿಲು ಕಾಯುವವನಲ್ಲ. ಸ್ವಾಭಿಮಾನ ಕಳೆದುಕೊಂಡು ಬಾಳುವ ವ್ಯಕ್ತಿ ನಾನಲ್ಲ. ಅಧಿಕಾರ ಬಂದ್ರೆ ಓಕೆ ಇಲ್ಲದಿದ್ದರೆ ಪರವಾಗಿಲ್ಲ. ಯಾವುದಕ್ಕೂ ಬೇಸರ ಪಡದೆ ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸುವೆ. ಈಗಾಗಲೇ ನೂತನ ಸಚಿವರು ನನ್ನೊಂದಿಗೆ ಮಾತನಾಡಿ ಸಹಕಾರ ಕೊಡಿ ಎಂದಿದ್ದಾರೆ. ಅವರೊಟ್ಟಿಗೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುವೆ. ಯಾರೂ ಅಸಮಾಧಾನ ಪಡೋದು ಬೇಡ ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಟಿ.ನಾಗರೆಡ್ಡಿ, ಹಿರಿಯ ಮುಖಂಡ ಎನ್ ವೈ.ಪೆನ್ನೋಬಳ ಸ್ವಾಮಿ,ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಸುಭಾನ್ ಸಾಬ್, ಪಟೇಲ್ ಪಾಪನಾಯಕ, ಜಿಪಂ ಮಾಜಿ ಸದಸ್ಯರಾದ ಎಚ್.ಟಿ.ನಾಗರೆಡ್ಡಿ, ಬಾಲರಾಜ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿ.ಪ್ರಕಾಶ್, ಗುರುರಾಜಲು, ಹಿರಿಯ ಮುಖಂಡ ಬಡೋಬಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ವಿಶ್ವನಾಥ ರೆಡ್ಡಿ, ತಾಪಂ ಮಾಜಿ ಉಪಾಧ್ಯಕ್ಷ ದಡಗೂರು ಮಂಜಣ್ಣ,ಕುಮಾರ ಗೌಡ,ಹಿರೇಹಳ್ಳಿ ಮಲ್ಲೇಶ್,ಯೂತ್ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ದಾದಪೀರ್, ಪ್ರಭುಸ್ವಾಮಿ, ಹಿಮಾಮ್,ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಸುಧಾ, ಜಯಲಕ್ಷ್ಮಿ, ಮಂಜಮ್ಮ, ಯುವ ಮುಖಂಡ ಬಂಡೆ ಕಪಿಲೆ ಓಬಯ್ಯ, ವಕೀಲರಾದ ಜಯರಾಮ್, ಚಂದ್ರಣ್ಣ, ಪ್ರಚಾರ ಸಮಿತಿ ಅಧ್ಯಕ್ಷ ವೀರನ ಗೌಡ, ಬಿ.ಟಿ.ನಾಗಭೂಷಣ ಇದ್ದರು.