ಚಿತ್ರನಟ ಯೇಸು ಪ್ರಕಾಶ್ ನಿಧನ

| Published : Apr 01 2024, 12:45 AM IST

ಸಾರಾಂಶ

ಚಿತ್ರರಂಗದಲ್ಲಿ ಪ್ರಕಾಶ್ ಹೆಗ್ಗೋಡು ಎಂದು ಗುರುತಿಸಲ್ಪಡುತ್ತಿದ್ದ ಯೇಸು ಪ್ರಕಾಶ್ ಕನ್ನಡದ ವೀರು ಚಿತ್ರದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಸಂತ, ಮಾದೇಶ, ಬೃಂದಾವನ, ಕಲ್ಪನಾ-೨, ರಾಜಾಹುಲಿ ಸೇರಿ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಾದ ದರ್ಶನ್, ಪುನೀತ್ ರಾಜ್‌ಕುಮಾರ್‌, ಯಶ್, ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದಲ್ಲದೆ, ಅಶೋಕ ಕಶ್ಯಪ್ ನಿರ್ದೇಶನದ ಅಂಬುಟಿ-ಇಂಬುಟಿ ತಮಿಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

ಕನ್ನಡಪ್ರಭ ವಾರ್ತೆ ಸಾಗರ

ಕನ್ನಡದ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ, ರಂಗಭೂಮಿ, ಪರಿಸರ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ತಾಲೂಕಿನ ಹೆಗ್ಗೋಡು ಸಮೀಪದ ಕಲ್ಲುಕೊಪ್ಪ ಗ್ರಾಮದ ಯೇಸುಪ್ರಕಾಶ್ (೫೮) ತೀವ್ರ ಅನಾರೋಗ್ಯದಿಂದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಚಿತ್ರರಂಗದಲ್ಲಿ ಪ್ರಕಾಶ್ ಹೆಗ್ಗೋಡು ಎಂದು ಗುರುತಿಸಲ್ಪಡುತ್ತಿದ್ದ ಯೇಸು ಪ್ರಕಾಶ್ ಕನ್ನಡದ ವೀರು ಚಿತ್ರದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಸಂತ, ಮಾದೇಶ, ಬೃಂದಾವನ, ಕಲ್ಪನಾ-೨, ರಾಜಾಹುಲಿ ಸೇರಿ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಾದ ದರ್ಶನ್, ಪುನೀತ್ ರಾಜ್‌ಕುಮಾರ್‌, ಯಶ್, ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದಲ್ಲದೆ, ಅಶೋಕ ಕಶ್ಯಪ್ ನಿರ್ದೇಶನದ ಅಂಬುಟಿ-ಇಂಬುಟಿ ತಮಿಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

ನೀನಾಸಂನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಯೇಸುಪ್ರಕಾಶ್ ಸಂಗ್ಯಾ-ಬಾಳ್ಯ, ವಿಗಡ ವಿಕ್ರಮರಾಯ, ವೆನ್ನಿಸಿನ ವ್ಯಾಪಾರಿ, ಶಹಜಹಾನ್, ಕೆಂಪು ಕಣಗಿಲೆ, ಕೆ.ಜಿ. ಸುಬ್ಬಣ್ಣ ರಂಗಸಮೂಹದೊಂದಿಗೆ ಸೇರಿಗೆ ಸವ್ವಾಸೇರು, ಕ್ರಮ-ವಿಕ್ರಮ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪರಿಸರ ಜಾಗೃತಿ ಬೀದಿ ನಾಟಕ ದಹಿಸುತ್ತಿದೆ ಧರಣಿ ರಚಿಸಿ, ನಿರ್ದೇಶಿಸಿ, ಅಭಿನಯಿಸಿದ್ದರು. ಈ ನಾಟಕ ಜಿಲ್ಲೆಯ ಹಲವು ಕಡೆಯಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.

ಪರಿಸರ, ಕೆರೆಗಳ ಕಾಯಕಲ್ಪಕ್ಕೆ ಶ್ರಮ:

ಇತ್ತೀಚೆಗೆ ಹೊಸನಗರದ ಸಾರಾ ಸಂಸ್ಥೆಯೊಂದಿಗೆ ಸೇರಿ ಕೆರೆ ಪುನರುಜ್ಜೀವನ, ಪರಿಸರ ಸದೃಢತೆಯ ಯೋಜನೆಗಳಲ್ಲಿ ತೊಡಗಿಸಿಕೊಂಡು ಸಾಗರದ ಸುತ್ತಮುತ್ತ ಸಾಮಾಜಿಕ ಚಟುವಟಿಕೆಯಲ್ಲಿ ನಿರತರಾಗಿದ್ದರು. ರಾಜ್ಯಮಟ್ಟದ ಪರಿಸರ ಜಾಗೃತಿ ಶಿಬಿರ ಸಂಘಟಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಪರಿಸರ ಕುರಿತು ಅರಿವು ಮೂಡಿಸಲು ಶ್ರಮಿಸಿದ್ದರು. ಬೀಜದುಂಡೆ ತಯಾರಿ, ಜಲಸಾಕ್ಷಾರ, ಇಂಗುಗುಂಡಿ ನಿರ್ಮಾಣ, ಕಿರು ಅರಣ್ಯ ನಿರ್ಮಾಣ ಹೀಗೆ ಯೇಸು ಪ್ರಕಾಶ್ ಪರಿಸರದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದರು. ಪ್ರಮುಖವಾಗಿ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವಲ್ಲಿ ಯೇಸು ಪ್ರಕಾಶ್ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಸುಮಾರು ೧೭ ಕೆರೆಗಳ ಕಾಯಕಲ್ಪದಲ್ಲಿ ಅವರು ಶ್ರಮಿಸಿದ್ದರು.

ಯೇಸುಪ್ರಕಾಶ್ ನಿಧನಕ್ಕೆ ತಾಲೂಕಿನ ಹಲವು ರಂಗಕರ್ಮಿಗಳು ಕಂಬನಿ ಮಿಡಿದಿದ್ದಾರೆ. ಭಾನುವಾರ ಬೆಳಗ್ಗೆ ೯ ಗಂಟೆಯಿಂದ ಕಲ್ಲುಕೊಪ್ಪದ ಅವರ ಸ್ವಗೃಹದಲ್ಲಿ ಅಂತಿಮದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮುರುಘಾ ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.