ಅತ್ತೆ-ಸೊಸೆ ಎಂಬುದು ಕೇವಲ ಕುಟುಂಬದ ಸಂಬಂಧವಲ್ಲ. ಪ್ರೀತಿ, ಗೌರವ, ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಬೆಸೆಯುವ ಆತ್ಮೀಯ ಬಾಂಧವ್ಯವಾಗಿದೆ. ಇಂತಹ ಮಧುರ ಸಂಬಂಧಗಳ ವಿಶೇಷತೆ ಜನರಿಗೆ ಪರಿಚಯಿಸುವ ಉದ್ದೇಶದಿಂದ ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಸ್ಮಾರ್ಟ್ ಸೊಸೆಯಂದಿರು ಕಾರ್ಯಕ್ರಮದ ವಿಶೇಷ ಸಂಚಿಕೆಗಳ ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅತ್ತೆ-ಸೊಸೆ ಎಂಬುದು ಕೇವಲ ಕುಟುಂಬದ ಸಂಬಂಧವಲ್ಲ. ಪ್ರೀತಿ, ಗೌರವ, ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಬೆಸೆಯುವ ಆತ್ಮೀಯ ಬಾಂಧವ್ಯವಾಗಿದೆ. ಇಂತಹ ಮಧುರ ಸಂಬಂಧಗಳ ವಿಶೇಷತೆ ಜನರಿಗೆ ಪರಿಚಯಿಸುವ ಉದ್ದೇಶದಿಂದ ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಸ್ಮಾರ್ಟ್ ಸೊಸೆಯಂದಿರು ಕಾರ್ಯಕ್ರಮದ ವಿಶೇಷ ಸಂಚಿಕೆಗಳ ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆಯಿತು.ಬಾಗಲಕೋಟೆ ನಗರದ ವಿವಿಧೆಡೆ ಸುಮಾರು 8 ಸಂಚಿಕೆಗಳಿಗಾಗಿ ಚಿತ್ರೀಕರಣ ನಡೆಸಲಾಯಿತು. ಕಾರ್ಯಕ್ರಮದ ತಂಡ ಮನೆ ಮನೆಗೆ ತೆರಳಿ ಅತ್ತೆ-ಸೊಸೆಯರೊಂದಿಗೆ ಸಂವಾದ ನಡೆಸುವುದರ ಜತೆಗೆ ಆಟ, ಹಾಡು ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳ ಮೂಲಕ ಅವರ ನಡುವಿನ ಆತ್ಮೀಯ ಬಾಂಧವ್ಯ ದಾಖಲಿಸಿತು.
ಕಾಲ ಬದಲಾದಂತೆ ಕುಟುಂಬದ ಜೀವನ ಶೈಲಿಯಲ್ಲೂ ಹಲವು ಬದಲಾವಣೆಗಳಾಗಿದ್ದರೂ, ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕಷ್ಟ-ಸುಖಗಳಲ್ಲಿ ಬೆಂಬಲವಾಗಿ ನಿಲ್ಲುವ ಅತ್ತೆ-ಸೊಸೆಯರ ಸಂಬಂಧ ಕುಟುಂಬದ ಸಂತೋಷಕ್ಕೆ ಪ್ರಮುಖ ಕಾರಣವಾಗುತ್ತದೆ. ಇಂತಹ ಸೌಹಾರ್ದಯುತ ಸಂಬಂಧಗಳನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸುವ ಪ್ರಯತ್ನವನ್ನು ಸ್ಮಾರ್ಟ್ ಸೊಸೆಯಂದಿರು ಕಾರ್ಯಕ್ರಮ ಮಾಡುತ್ತಿದೆ.ಈಗಾಗಲೇ ಕಾರ್ಯಕ್ರಮದ 78 ಸಂಚಿಕೆಗಳು ಪೂರ್ಣಗೊಂಡಿದ್ದು, ಮುಂದಿನ ಸಂಚಿಕೆಗಳಿಗಾಗಿ ಬಾಗಲಕೋಟೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅತ್ತೆ-ಸೊಸೆಯರ ಗಟ್ಟಿಯಾದ ಬಾಂಧವ್ಯ ಚಿತ್ರೀಕರಿಸಲಾಗುತ್ತಿದೆ. ಬಾಗಲಕೋಟೆ ಭಾಗದ ಅತ್ತೆ-ಸೊಸೆಯರಿಂದ ಉತ್ತಮ ಪ್ರೋತ್ಸಾಹ ಹಾಗೂ ಬೆಂಬಲ ದೊರೆತಿದೆ ಎಂದು ಕಾರ್ಯಕ್ರಮದ ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಜಿ. ಗೋವಿಂದರಾಜ ತಿಳಿಸಿದ್ದಾರೆ.
ಖ್ಯಾತ ನಿರೂಪಕ ರಾಜಶೇಖರ ಹೆಚ್., ಛಾಯಾಗ್ರಾಹಕ ಎಸ್. ಲೋಕಾಭಿರಾಮನ್, ಧ್ವನಿಗ್ರಹಣದಲ್ಲಿ ಹೆಚ್. ಮಾರಪ್ಪ, ವಿಜಯಭಾಸ್ಕರ ಸೇರಿದಂತೆ ಚಿತ್ರೀಕರಣ ತಂಡದ ಸದಸ್ಯರು ವಿಶೇಷ ಸಂಚಿಕೆಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.-----ಚಿತ್ರೀಕರಣ:
ಡಾ. ಸುಮಂಗಲಾ ಹಾಗೂ ಡಾ. ನೇಹಾ ದಡ್ಡೆನವರ ಪರಿವಾರ, ಮತ್ತು ಸುವರ್ಣಾ ಮತ್ತು ಅಶ್ವೀನಿ ಪತ್ತಾರ ಕುಟುಂಬ, ಪರಿವಾರ, ಲಲೀತಾಶ್ರೀ ಅನ್ನಪೂಣರ್ಾ ಕಮ್ಮಾರ ಕುಟುಂಬ, ಅನುಜಾ ಮತ್ತು ರಾಣಿ ಮರ್ದಾ ಕುಟುಂಬ, ಪುಷ್ಫಾ, ಪ್ರತಿಭಾ ಕುದರಿ ಕನ್ನೂರ, ಕಸ್ತೂರಿಭಾಯಿ ಹಾಗೂ ವಿಜಯಲಕ್ಷ್ಮೀ ಬಡಿಗೇರ ಕುಟುಂಬ, ರಾಜೇಶ್ವರಿ ಹಾಗೂ ಶ್ರೀಧೇವಿ ಪತ್ತಾರ ಮನೆಗಳಲ್ಲಿ ಚಿತ್ರೀಕರಣ ಮಾಡಲಾಯಿತು.ಬಾಗಲಕೋಟೆಯಲ್ಲಿ ಚಿತ್ರೀಕರಿಸಲಾದ ವಿಶೇಷ ಸಂಚಿಕೆಗಳು ಮುಂದಿನ ತಿಂಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿವೆ.