ಸಾರಾಂಶ
ರಾಜ್ಯದಲ್ಲಿ ತ್ರಿಭಾಷಾ ಅಥವಾ ದ್ವಿಭಾಷಾ ಸೂತ್ರ ಕುರಿತು ಚರ್ಚೆ ಆಗುತ್ತಿದೆ. ಈ ವರೆಗೂ ಯಾವುದೇ ರೀತಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಗದಗ: ರಾಜ್ಯದಲ್ಲಿ ತ್ರಿಭಾಷಾ ಅಥವಾ ದ್ವಿಭಾಷಾ ಸೂತ್ರ ಕುರಿತು ಚರ್ಚೆ ಆಗುತ್ತಿದೆ. ಈ ವರೆಗೂ ಯಾವುದೇ ರೀತಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದ್ವಿಭಾಷಾ ಕುರಿತು ಸಿಎಂ ಸಿದ್ದರಾಮಯ್ಯ ಅವರು ಕೆಲವೆಡೆ ಚರ್ಚೆ ಮಾಡಿದ್ದು ನಿಜ. ಆದರೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕಾಗುತ್ತದೆ. ಎಸ್ಇಪಿ ಸಮಿತಿಯಲ್ಲಿ ತೀರ್ಮಾನ ಕೈಗೊಂಡು ನಂತರ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಈ ನಿರ್ಣಯ ಮುಂದಿನ ವರ್ಷಕ್ಕೆ ಅಂತಿಮಗೊಳ್ಳುತ್ತದೆ. ಇದಕ್ಕೆ ಶಾಸಕರ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ.ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ, ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿಯನ್ನು(ಎಸ್ಇಪಿ)ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತದೆ. ಹಾಗಾಗಿ ಎಸ್ಇಪಿ ಸಮಿತಿಯಲ್ಲಿ ದ್ವಿಭಾಷಾ, ತ್ರಿಭಾಷಾ ಸೂತ್ರ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಿಕ್ಷಕರ ನೇಮಕಾತಿಗೆ ಕಾನೂನು ಅಭಿಪ್ರಾಯ ಕೇಳಿದ್ದೇವೆ: ಸುಪ್ರೀಂ ಕೋರ್ಟಿನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಹಾಗಾಗಿ ಹೊಸ ಶಿಕ್ಷಕರ ನೇಮಕಾತಿ ಸಂಬಂಧ ಕಾನೂನು ಇಲಾಖೆ ಅಭಿಪ್ರಾಯ ಕೇಳಿದ್ದೇವೆ. ಕಾನೂನು ಇಲಾಖೆ ಅಭಿಪ್ರಾಯ ನೀಡಿದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಸುಪ್ರೀಂ ಕೋರ್ಟ್ನಲ್ಲಿ ಮಹಿಳಾ ಅಭ್ಯಥಿರ್ಗಳು ನೇಮಕಾತಿ ಸಂದರ್ಭದಲ್ಲಿ ಪತಿ ಅಥವಾ ತಂದೆಯ ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕಾ, ಎಂಬ ಪ್ರಕರಣ ಚಾಲ್ತಿಯಲ್ಲಿದ್ದು ಸುಪ್ರೀಂ ಕೋರ್ಟ್ ಆದೇಶದಂತೆ ಶಿಕ್ಷಣ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತದೆ. ಒಂದು ವೇಳೆ ಪ್ರಕರಣದಲ್ಲಿನ ಎರಡೂ ಪಾಟಿರ್ಯ ಅಭ್ಯರ್ಥಿಗಳನ್ನು ಈ ನೇಮಕಾತಿಯಲ್ಲಿ ಪರಿಗಣಿಸಬಹುದು ಎಂದು ಶಿಕ್ಷಣ ಇಲಾಖೆಯಿಂದ ಕಾನೂನು ಇಲಾಖೆಯನ್ನು ಕೇಳಿಕೊಂಡಿದ್ದೇವೆ. ಈ ಬಗ್ಗೆ ಕಾನೂನು ಸಲಹೆಯ ಮೇರೆಗೆ ನಡೆದುಕೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.