ಕಡೆಗೂ ರೈತರ ದಶಕದ ಹೋರಾಟಕ್ಕೆ ಸಿಕ್ಕಿತು ಪರಿಹಾರ..!

| Published : Jun 26 2024, 12:30 AM IST

ಕಡೆಗೂ ರೈತರ ದಶಕದ ಹೋರಾಟಕ್ಕೆ ಸಿಕ್ಕಿತು ಪರಿಹಾರ..!
Share this Article
  • FB
  • TW
  • Linkdin
  • Email

ಸಾರಾಂಶ

1959ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆರಂಭಗೊಂಡು ಇದಕ್ಕಾಗಿ ರೈತ 26 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿತ್ತು. ಕಳೆದ ಒಂದು ದಶಕದ ಹಿಂದೆ ಪಾಲಿಟೆಕ್ನಿಕ್ ಜಾಗದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋ ನಿರ್ಮಾಣಗೊಂಡವು. ಪಾಲಿಟೆಕ್ನಿಕ್ ಹಿಂಭಾಗದ ಜಮೀನುಗಳಿಗೆ ಹೋಗಲು ಕಾಲೇಜಿನ ಆವರಣದೊಳಗೆ ಇದ್ದ ಸಾರ್ವಜನಿಕ ರಸ್ತೆಯನ್ನು ಮುಚ್ಚಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿದ್ದ ಸಾರ್ವಜನಿಕ ರಸ್ತೆಗೆ ಪರ್ಯಾಯವಾಗಿ ಕಾಲೇಜಿನ ಆವರಣದ ಅಂಚಿನಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಅಗತ್ಯ ಜಾಗ ಬಿಡಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದ್ದರಿಂದ ಹಲವು ವರ್ಷಗಳ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಅಗತ್ಯ ರಸ್ತೆ ಬಿಡುವ ತೀರ್ಮಾನಕ್ಕೆ ಬರಲಾಯಿತು.

1959ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆರಂಭಗೊಂಡು ಇದಕ್ಕಾಗಿ ರೈತ 26 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿತ್ತು. ಕಳೆದ ಒಂದು ದಶಕದ ಹಿಂದೆ ಪಾಲಿಟೆಕ್ನಿಕ್ ಜಾಗದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋ ನಿರ್ಮಾಣಗೊಂಡವು. ಪಾಲಿಟೆಕ್ನಿಕ್ ಹಿಂಭಾಗದ ಜಮೀನುಗಳಿಗೆ ಹೋಗಲು ಕಾಲೇಜಿನ ಆವರಣದೊಳಗೆ ಇದ್ದ ಸಾರ್ವಜನಿಕ ರಸ್ತೆಯನ್ನು ಮುಚ್ಚಲಾಗಿತ್ತು. ಇದರಿಂದ ಸಂಕಷ್ಟಕ್ಕೆ ಒಳಗಾದ ರೈತರು ಮುಚ್ಚಿರುವ ರಸ್ತೆಯನ್ನು ಬಿಡಿಸಿಕೊಡುವಂತೆ ಕಳೆದ ಒಂದು ದಶಕದಿಂದ ಹೋರಾಟ ನಡೆಸುತ್ತಿದ್ದರು.

ರೈತರ ಕಷ್ಟವನ್ನು ಕಣ್ಣಾರೆ ಕಂಡಿದ್ದ ಶಾಸಕ ಎಚ್.ಟಿ.ಮಂಜು ಪಾಲಿಟೆಕ್ನಿಕ್ ಪ್ರಾಂಶುಪಾಲರ ಕೊಠಡಿಯಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ತಾಂತ್ರಿಕ ಶಿಕ್ಷಣ ಇಲಾಖೆ ಕಮೀಷನರ್ ಜಗದೀಶ್ ಹಾಗೂ ಜಂಟಿ ನಿರ್ದೇಶಕ ನಾಗಭೂಷಣ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮುಚ್ಚಿರುವ ರಸ್ತೆ, ರೈತರಿಗೆ ಆಗಿರುವ ತೊಂದರೆಯನ್ನು ವಿವರಿಸಿದರು.

ಅಂತಿಮವಾಗಿ ಪಾಲಿಟೆಕ್ನಿಕ್ ಕಾಲೇಜಿನ ಮಧ್ಯಭಾಗದಲ್ಲಿ ರೈತರು ಓಡಾಡಲು ಬಳಸುತ್ತಿದ್ದ ಕಚ್ಚಾ ರಸ್ತೆಗೆ ಪರ್ಯಾಯವಾಗಿ ಬಸ್ ಡಿಪೋಗೆ ಹೊಂದಿಕೊಂಡಂತೆ ಪಾಲಿಟೆಕ್ನಿಕ್ ಕಾಂಪೌಂಡ್ ಪಕ್ಕದಲ್ಲಿ ರಸ್ತೆ ನಿರ್ಮಿಸಿ ರೈತರು ಸೇರಿದಂತೆ ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಪಾಲಿಟೆಕ್ನಿಕ್ ಕಟ್ಟಡದ ಹಿಂಭಾಗದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಇದೆ. ನಿಯಮಾನುಸಾರ ಹಳೇ ರಸ್ತೆ ಬಿಡಲೇಬೇಕಾಗುತ್ತದೆ. ಮೂಲ ನಕಾಶೆಯಲ್ಲಿ ರಸ್ತೆಗೆ ಬಿಟ್ಟಿರುವ ಜಾಗವನ್ನು ಮುಚ್ಚಿ ಕಾಂಪೌಂಡ್ ನಿರ್ಮಿಸಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಮಾನವೀಯ ನೆಲೆಗಟ್ಟಿನ ಆಧಾರದಂತೆ ಪರ್ಯಾಯ ರಸ್ತೆಗೆ ಜಾಗ ಬಿಟ್ಟುಕೊಡುವುದು ಅನಿವಾರ್ಯವಾಗಿದೆ ಎಂದರು.

ಪ್ರಸ್ತುತ ಪಾಲಿಟೆಕ್ನಿಕ್ ಕಟ್ಟಡದ ಪಕ್ಕದಲ್ಲಿ ನಿರ್ಮಿಸಿರುವ ಬಸ್ ಡಿಪೋಗೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣಕ್ಕೆ ತಕ್ಷಣವೇ ಕ್ರಮ ಕೈಗೊಂಡು ರಸ್ತೆಗೆ ಸೂಚಿಸಿರುವ ಜಾಗವನ್ನು ಭೂದಾಖಲೆಯಲ್ಲಿ ನಮೂದಿಸಿಕೊಟ್ಟು ಅನುಕೂಲ ಮಾಡಿಕೊಡುತ್ತೇನೆ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ರೈತರ ಹಲವು ದಶಕಗಳ ಹೋರಾಟಕ್ಕೆ ಪ್ರತಿಫಲ ದೊರಕಿದೆ. ಪಾಲಿಟೆಕ್ನಿಕ್ ಕಟ್ಟಡದ ಹಿಂಭಾಗದ ಜಮೀನುಗಳಿಗೆ ರೈತರು ತಮ್ಮ ಬಂಡಿಗಳು ಹಾಗೂ ಜಾನುವಾರುಗಳೊಂದಿಗೆ ಹೋಗಲು ಅನುಕೂಲವಾಗುವಂತೆ ಪರ್ಯಾಯವಾಗಿ ರಸ್ತೆ ನಿರ್ಮಿಸಿಕೊಡಲಾಗುವುದು ಎಂದರು.

ರಸ್ತೆ ನಿರ್ಮಿಸಲು ಬೇಕಾದ ವಿಶೇಷ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡುತ್ತೇನೆ. ಅನ್ನದಾತ ರೈತರಿಗೆ ತೊಂದರೆ ನೀಡಿ ನಾವುಗಳೂ ಸಾಧಿಸಬೇಕಾದ್ದು ಏನೂ ಇಲ್ಲ. ಆದ್ದರಿಂದ ನಾಳೆಯಿಂದಲೇ ರಸ್ತೆ ನಿರ್ಮಾಣಕ್ಕೆ ಸ್ಥಳ ಗುರುತಿಸಿಕೊಡಿ ಎಂದು ಸಭೆಯಲ್ಲಿದ್ದ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ಧಯ್ಯ ಅವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಎಚ್.ಎಸ್.ನಾಗರಾಜು, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿದ್ಧಯಯ್ಯ, ರೈತ ಮುಖಂಡರಾದ ವಿಠಲಾಪುರ ಜಯರಾಂ, ಕೆ.ಎಸ್.ಗೋಪಾಲ, ಗುತ್ತಿಗೆದಾರ ಶೀಳನೆರೆ ಭರತ್ ಸೇರಿದಂತೆ ಹಲವರು ಇದ್ದರು.