ಕೊನೆಗೂ ಮಂಗಳೂರು- ಕಾರ್ಕಳ ಸರ್ಕಾರಿ ಬಸ್ಸು ಸಂಚಾರ!

| Published : Dec 13 2024, 12:49 AM IST

ಸಾರಾಂಶ

ಇದೇ ಮಾರ್ಗದಲ್ಲಿ 8 ಸರ್ಕಾರಿ ಬಸ್ಸುಗಳ ಸಂಚಾರಕ್ಕೆ ಕೆಎಸ್ಸಾರ್ಟಿಸಿ 2014ರಲ್ಲಿ ಅರ್ಜಿ ಸಲ್ಲಿಸಿರುವ ವಿಷಯದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆರ್‌ಟಿಎ ಸಭೆ ನಡೆದು ಪರ- ವಿರೋಧ ವಾದ ಮಂಡನೆ ಆಗಿದೆ. ಜಿಲ್ಲಾಧಿಕಾರಿ ಆದೇಶ ಇನ್ನಷ್ಟೇ ಬರಬೇಕಿದ್ದು, ಪೂರಕ ನಿರ್ಧಾರ ಹೊರಬಿದ್ದರೆ ಮತ್ತಷ್ಟು ಬಸ್ಸುಗಳು ಮಂಗಳೂರು- ಕಾರ್ಕಳ ಮಾರ್ಗದಲ್ಲಿ ಸಂಚಾರ ಮಾಡಲಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಖಾಸಗಿ ಭಾರೀ ಲಾಬಿಯ ಹೊರತಾಗಿಯೂ ಮಂಗಳೂರು- ಮೂಡುಬಿದಿರೆ- ಕಾರ್ಕಳ ಮಾರ್ಗಕ್ಕೆ ಕೊನೆಗೂ ಸರ್ಕಾರಿ ಬಸ್‌ ಸಂಚಾರ ಗುರುವಾರ ಆರಂಭವಾಗಿದೆ. ಈ ಮೂಲಕ ಸರ್ಕಾರಿ ಬಸ್ಸು ಬೇಕೆಂಬ ದಶಕಗಳ ಜನರ ಬೇಡಿಕೆ ಈಡೇರಿದೆ. ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರಾವಳಿಯ ಬಹುತೇಕ ಪ್ರಮುಖ ರೂಟ್‌ಗಳಲ್ಲಿ ಸರ್ಕಾರಿ ಬಸ್‌ ಸಂಚಾರ ಆರಂಭವಾಗಿದ್ದರೂ ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳಕ್ಕೆ ಸರ್ಕಾರಿ ಬಸ್‌ ಸಂಚಾರ ಮಾಡಲು ಖಾಸಗಿ ಲಾಬಿ ಬಿಟ್ಟಿರಲಿಲ್ಲ. ಆರ್‌ಟಿಎ ಸಭೆಗಳಲ್ಲಿ ಈ ಬಗ್ಗೆ ನಿರಂತರ ಬೇಡಿಕೆ ಬಂದರೂ ಖಾಸಗಿ ಬಸ್ಸು ಮಾಲೀಕರ ಬಲಿಷ್ಠ ಪ್ರಭಾವದಿಂದ ಈ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. ಇದೀಗ ಕೊನೆಗೂ ಖಾಸಗಿ ಪ್ರಭಾವವನ್ನು ಮೀರಿ ಸರ್ಕಾರಿ ಬಸ್ಸು ಸಂಚಾರ ಮಾಡಿರುವುದು ವಿಶೇಷ.

ನೂತನ ಸರ್ಕಾರಿ ಬಸ್‌ ಸಂಚಾರ ಆರಂಭವಾಗುವುದರೊಂದಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ಲಾಭ ಈ ಮಾರ್ಗದುದ್ದಕ್ಕೂ ಸಂಚರಿಸುವ ಜನರಿಗೂ ಲಭ್ಯವಾಗಲಿದೆ.

ಎರಡು ಬಸ್ಸು ಸಂಚಾರ:

ಇದೀಗ ಪ್ರಾಯೋಗಿಕವಾಗಿ ಎರಡು ಸರ್ಕಾರಿ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ. ಮಂಗಳೂರಿನಿಂದ ಕಾರ್ಕಳಕ್ಕೆ ವಾಮಂಜೂರು, ಗುರುಪುರ, ಕೈಕಂಬ, ಮೂಡುಬಿದಿರೆ, ಬೆಳುವಾಯಿ ಮೂಲಕ ಒಂದು ಬಸ್ಸು ಏಳು ಟ್ರಿಪ್‌ನಂತೆ ದಿನಕ್ಕೆ ಒಟ್ಟು 14 ಟ್ರಿಪ್‌ ಸಂಚಾರ ನಡೆಸಲಿವೆ.

ವೇಳಾಪಟ್ಟಿ:

ಒಂದು ಬಸ್ಸು ಮಂಗಳೂರು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಿಂದ ಬೆಳಗ್ಗೆ 7.15ಕ್ಕೆ ಹೊರಟು 8.45ಕ್ಕೆ ಕಾರ್ಕಳ ತಲುಪಲಿದೆ. ಕಾರ್ಕಳದಿಂದ 9 ಗಂಟೆಗೆ ಹೊರಟು 10.30ಕ್ಕೆ ಮಂಗಳೂರು, ಮಂಗಳೂರಿನಿಂದ 11ಕ್ಕೆ ಹೊರಟು 12.30ಕ್ಕೆ ಕಾರ್ಕಳ, ಕಾರ್ಕಳದಿಂದ 12.45 ಗಂಟೆಗೆ ಹೊರಟು 2.15ಕ್ಕೆ ಮಂಗಳೂರು, ಮಂಗಳೂರಿನಿಂದ 2.45ಕ್ಕೆ ಹೊರಟು 4.15ಕ್ಕೆ ಕಾರ್ಕಳ, ಕಾರ್ಕಳದಿಂದ 4.30ಕ್ಕೆ ಹೊರಟು 6 ಗಂಟೆಗೆ ಮಂಗಳೂರು, ಕೊನೆ ಟ್ರಿಪ್ 6.15ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 7.45ಕ್ಕೆ ಕಾರ್ಕಳ ತಲುಪಲಿದೆ.

ಇನ್ನೊಂದು ಬಸ್ಸು ಬೆಳಗ್ಗೆ 7.15ಕ್ಕೆ ಕಾರ್ಕಳದಿಂದ ಹೊರಟು 8.45ಕ್ಕೆ ಮಂಗಳೂರು, ಮಂಗಳೂರಿನಿಂದ 9 ಗಂಟೆಗೆ ಹೊರಟು 10.30ಕ್ಕೆ ಕಾರ್ಕಳ, ಕಾರ್ಕಳದಿಂದ 11ಕ್ಕೆ ಹೊರಟು 12.30ಕ್ಕೆ ಮಂಗಳೂರು, ಮಂಗಳೂರಿನಿಂದ 12.45ಕ್ಕೆ ಹೊರಟು 2.15ಕ್ಕೆ ಕಾರ್ಕಳ, ಕಾರ್ಕಳದಿಂದ 2.45ಕ್ಕೆ ಹೊರಟು 4.15ಕ್ಕೆ ಮಂಗಳೂರು, ಮಂಗಳೂರಿನಿಂದ 4.30ಕ್ಕೆ ಹೊರಟು 6 ಗಂಟೆಗೆ ಕಾರ್ಕಳ, ಕಾರ್ಕಳದಿಂದ ದಿನದ ಕೊನೆ ಟ್ರಿಪ್‌ 6.15ಕ್ಕೆ ಹೊರಟು ರಾತ್ರಿ 7.45ಕ್ಕೆ ಮಂಗಳೂರು ತಲುಪಲಿದೆ.

ಒತ್ತಡ ತಂದ ಐವನ್‌ ಡಿಸೋಜ:

ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಬಸ್ಸುಗಳ ಕೊರತೆಯಿಂದ ಶಕ್ತಿ ಯೋಜನೆ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಶಾಸಕ ಐವನ್ ಡಿಸೋಜ ಅವರು ಬಹುಮುಖ್ಯ ರೂಟ್‌ ಆಗಿರುವ ಮಂಗಳೂರು- ಕಾರ್ಕಳ ಮಾರ್ಗದಲ್ಲಿ ಬಸ್‌ ಸಂಚಾರ ಆರಂಭಿಸುವಂತೆ ಜಿಲ್ಲಾಧಿಕಾರಿ, ಆರ್‌ಟಿಒ, ಕೆಎಸ್ಸಾರ್ಟಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿ, ವಿಧಾನ ಮಂಡಲದಲ್ಲೂ ಚರ್ಚೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಅದರ ಫಲವಾಗಿ ಕೊನೆಗೂ ಈ ಭಾಗದ ಜನರ ಬೇಡಿಕೆ ಈಡೇರಿದೆ.

ಇದೇ ಮಾರ್ಗದಲ್ಲಿ 8 ಸರ್ಕಾರಿ ಬಸ್ಸುಗಳ ಸಂಚಾರಕ್ಕೆ ಕೆಎಸ್ಸಾರ್ಟಿಸಿ 2014ರಲ್ಲಿ ಅರ್ಜಿ ಸಲ್ಲಿಸಿರುವ ವಿಷಯದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆರ್‌ಟಿಎ ಸಭೆ ನಡೆದು ಪರ- ವಿರೋಧ ವಾದ ಮಂಡನೆ ಆಗಿದೆ. ಜಿಲ್ಲಾಧಿಕಾರಿ ಆದೇಶ ಇನ್ನಷ್ಟೇ ಬರಬೇಕಿದ್ದು, ಪೂರಕ ನಿರ್ಧಾರ ಹೊರಬಿದ್ದರೆ ಮತ್ತಷ್ಟು ಬಸ್ಸುಗಳು ಮಂಗಳೂರು- ಕಾರ್ಕಳ ಮಾರ್ಗದಲ್ಲಿ ಸಂಚಾರ ಮಾಡಲಿವೆ.