ಸಾರಾಂಶ
ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಸನ್ಮಾನಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶನಿವಾರ ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಭಾರತ ಲಕ್ಷ್ಮೀ ಬಿರುದು ನೀಡಿ ಸನ್ಮಾನಿಸಿದರು.ಪರ್ಯಾಯ ಪುತ್ತಿಗೆ ಮಠದಿಂದ ಕೃಷ್ಣಮಠದ ಮೇಲಂತಸ್ತಿನ ಪೌಳಿಗೆ ನೂತನ ಕಾಷ್ಟ ಯಾಳಿ ಅಲಂಕಾರವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ನಂತರ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಅವರನ್ನು ಪುತ್ತಿಗೆ ಮಠಾಧೀಶರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥರು ಸನ್ಮಾನಿಸಿದರು.ಈ ಸಂದರ್ಭ ಸಚಿವೆ, ವೇದಿಕೆಯಲ್ಲಿ ಭಾರೀ ಕಡೆಗೋಲಿನ ಮೂಲಕ ಸಾಂಕೇತಿಕವಾಗಿ ಮಜ್ಜಿಗೆ ಕಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾರತ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಅವುಗಳ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಂತರು ಪ್ರಾರ್ಥನೆ ಮೂಲಕ ಬೆಂಬಲ ನೀಡಬೇಕು ಎಂದು ಮಠಾಧೀಶರಲ್ಲಿ ವಿನಂತಿಸಿದರು.ದೇಶದ ಮೇಲೆ ಯುವಜನತೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅವರಿಗಾಗಿ ದೇಶವನ್ನು ಸಮೃದ್ಧಗೊಳಿಸಬೇಕಾಗಿದೆ. ಭಾರತವನ್ನು ನಾವು ದೇವಿ, ಮಾತೆ ಎಂದು ಪೂಜಿಸುತ್ತೇವೆ. ಅಂತಹ ಭಾರತ ಎಲ್ಲರ ಹೃದಯದಲ್ಲಿ ಸ್ಥಾಪನೆಯಾಗಬೇಕು. ಈ ದೇಶದ ಸಮೃದ್ಧಿಗಾಗಿ, ಯುವಜನತೆಯ ನಿರೀಕ್ಷೆಗಳಿಗಾಗಿ ಸಂತರು, ಪೂಜ್ಯರು ದೇವರಲ್ಲಿ ಪ್ರಾರ್ಥಿಸಬೇಕು ಎಂದವರು ಕೈಮುಗಿದು ವೇದಿಕೆಯಲ್ಲಿದ್ದ ಶ್ರೀಪಾದರಲ್ಲಿ ಕೋರಿದರು.ತಾನು 2005ರಲ್ಲಿ ಕೃಷ್ಣಮಠಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದೆ. ಇದರಿಂದ ನನ್ನ ಜೀವನದಲ್ಲಿ ಹಿತವಾದ ದಿನಗಳು ಬಂದಿವೆ. ನಂತರವೂ ನನ್ನ ಕುಟುಂಬಸ್ಥರು ನಿರಂತರವಾಗಿ ಕೃಷ್ಣಮಠದ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದವರು ಗದ್ಗದಿತರಾಗಿ ನುಡಿದರು.ಕೃಷ್ಣಮಠದಲ್ಲಿ ಸೇವೆಯ ಸಂಸ್ಕೃತಿ ಜೀವಂತವಾಗಿದೆ. ಪುತ್ತಿಗೆ ಶ್ರೀಗಳು ಕೃಷ್ಣನ ಸಂದೇಶವನ್ನು ಹರಡುವ ಕೆಲಸ ಯಜ್ಞದಂತೆ ನಡೆಸುತಿದ್ದಾರೆ, ಇದು ದೇವರ ಅಸಾಮಾನ್ಯ ಸೇವೆಯಾಗಿದೆ ಎಂದವರು ಹೇಳಿದರು.ಇದೇ ಸಂದರ್ಭದಲ್ಲಿ ಪರ್ಯಾಯ ಶ್ರೀಗಳು ಇನ್ಫೋಸಿಸ್‌ನ ಸುಧಾ ನಾರಾಯಣಮೂರ್ತಿ, ಚೆನ್ನೈನ ಉದ್ಯಮಿ ರವಿ ಸ್ಯಾಮ್, ಹೈಕೋರ್ಚಿನ ನಿವೃತ್ತ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, ಜನರನ್ನು ಒಗ್ಗೂಡಿಸುವುದೇ ನಿಜವಾದ ಧರ್ಮದ ರಕ್ಷಣೆ. ಪುತ್ತಿಗೆ ಶ್ರೀಗಳು ಭಾರತದಲ್ಲಿ ಮಾತ್ರವಲ್ಲ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿಯೂ ಮಠಗಳನ್ನು ಸ್ಥಾಪಿಸಿ ಅಲ್ಲಿನ ಭಕ್ತರನ್ನು ಒಗ್ಗೂಡಿಸಿ ಧರ್ಮ ಪ್ರಸಾರ ಮಾಡುತ್ತಿದ್ದಾರೆ ಎಂದು ಕೊಂಡಾಡಿದರು.ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು. ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.----------------------ರುಕ್ಮಿಣಿಯಿಂದ ಮತ್ತೆ ಕೃಷ್ಣನ ಪೂಜೆ
ದ್ವಾರಕೆಯಲ್ಲಿ ರುಕ್ಮಣಿಯಿಂದ ಪೂಜಿಸಲ್ಪಟ್ಟಿದ್ದ ಉಡುಪಿ ಕೃಷ್ಣ. ನಿರ್ಮಲಾ ಸೀತಾರಾಮನ್ ಅವರ ಮೂಲಹೆಸರು ರುಕ್ಮಿಣಿ, ಇಂದು ಕೃಷ್ಣ ಮತ್ತೆ ರುಕ್ಮಿಣಿ ಅವರನ್ನು ಉಡುಪಿಗೆ ಕರೆಸಿ ಪೂಜೆ ಪಡೆದುಕೊಂಡಿದ್ದಾನೆ ಎಂದು ಪುತ್ತಿಗೆ ಶ್ರೀಗಳು ಹೇಳಿದರು.ಸತತವಾಗಿ 8 ಬಾರಿ ಕೇಂದ್ರ ಬಜೆಟನ್ನು ಮಂಡಿಸಿರುವ ನಿರ್ಮಲಾ ಸೀತರಾಮನ್, ದೇಶದ ಭಾಗ್ಯಲಕ್ಷ್ಮೀ. ಅವರು ಹಣಕಾಸು ಸಚಿವೆಯಾಗಿರುವಾಗಲೇ ದೇಶ ವಿಶ್ವಕ್ಕೆ ನಂ.1 ಆರ್ಥಿಕ ಶಕ್ತಿಯಾಗಲಿ ಎಂದು ಪ್ರಾರ್ಥಿಸಿ ಅವರಿಗೆ ಭಾರತ ಲಕ್ಷ್ಮೀ ಎಂದು ಬಿರುದು ನೀಡುತಿದ್ದೇವೆ ಎಂದವರು ಘೋಷಿಸಿದರು.--------------
ತ್ರಿಮೂರ್ತಿಗಳು ತಲೆ ಎತ್ತಿನಿಲ್ಲಬೇಕುದೇಶ ಉಳಿದರೆ ನಾವು ಉಳಿಯುತ್ತೇವೆ, ಆದ್ದರಿಂದ ದೇಶವನ್ನು ಉಳಿಸುವ ನಡೆಸುವ ತಾಕತ್ತಿರುವ ವ್ಯಕ್ತಿಗಾಗಿ ಹಿಂದುಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ದೇಶದಲ್ಲಿ ಅಯೋಧ್ಯೆಯ ನಂತರ ಇದೀಗ ಕಾಶಿ ಮತ್ತು ಮಥುರಾಗಳಲ್ಲಿಯೂ ಸಮಸ್ಯೆಗಳು ಬಗೆಹರಿದು, ಈ ಮೂರೂ ಕ್ಷೇತ್ರಗಳಲ್ಲಿ ತ್ರಿಮೂರ್ತಿಗಳು ತಲೆ ಎತ್ತಿ ನಿಲ್ಲುವಂತಾಗಬೇಕು ಎಂದವರು ಆಶಿಸಿದರು.---------------
ಕೃಷ್ಣನಿಗೆ ನೈವೇದ್ಯ ತಯಾರಿಸಿ ಪಾತ್ರೆ ತೊಳೆದ ನಿರ್ಮಲಾ, ಸುಧಾಮೂರ್ತಿಸುಧಾಮೂರ್ತಿ ಅವರು ಕೃಷ್ಣಮಠದಲ್ಲಿ ಕನಕಾಂಬರ ಹೂವಿನ 2 ಮಾಲೆಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಿದರು. ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಮತ್ತು ಸುಧಾ ಮೂರ್ತಿ ಕೃಷ್ಣಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹೊಸ್ತಿಲು ಪೂಜೆ ನೆರವೇರಿಸಿದರು. ನಂತರ ಇಬ್ಬರೂ ಕೃಷ್ಣನ ನೈವೇದ್ಯವನ್ನು ತಯಾರಿಸಿ, ಆ ಪಾತ್ರೆಗಳನ್ನು ತೊಳೆದು ಸೇವೆ ಸಲ್ಲಿಸಿದರು. ನಂತರ ಗೋಶಾಲೆಗೆ ತೆರಳಿ ಗೋವುಗಳಿಗೆ ಚಾರ ತಿನ್ನಿಸಿದರು.ಸಚಿವೆ ನಿರ್ಮಲಾ, ಗೀತಾಮಂದಿರದಲ್ಲಿ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಪುತ್ತಿಗೆ ವಿಶ್ವ ವಿದ್ಯಾಪೀಠಕ್ಕೆ ಚಾಲನೆ ನೀಡಿದರು. ಗೀತಾಮಂದಿರಯಲ್ಲಿರುವ ತಾಡವಾಲೆ, ಪುರಾತನ ಗ್ರಂಥಗಳ ಸಂಶೋಧನಾ ಕೇಂದ್ರಕ್ಕೂ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಇಬ್ಬರು ಮಹಿಳೆಯರು ದೇಶದಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿದ್ದರೂ, ಅವರಿಬ್ಬರ ಸರಳತೆ ಮತ್ತು ಭಕ್ತಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.