ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಪುರ ಗ್ರಾಮದ ಗೌಡನಕಟ್ಟೆ ಗ್ರಾಮದಲ್ಲಿ ಯುಗಾದಿ ಹಬ್ಬದಂದು ರತ್ನಮ್ಮ ಭೋವಿ ಅವರ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಗುಡಿಸಲಿನಲ್ಲಿದ್ದ ದಿನಬಳಕೆ ವಸ್ತುಗಳು, ಎರಡು ಹಸು, ಒಂದು ಕರು. ಎರಡು ಕುರಿ, ನಾಲ್ಕು ಮೇಕೆ ಸಂಪೂರ್ಣ ಭಸ್ಮವಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಧನ ಸಹಾಯ ಮಾಡಿದರು.ಸಂತ್ರಸ್ತರಿಗೆ ರೇಷನ್ ಕಾರ್ಡ್ ಇಲ್ಲದ ಕಾರಣ ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳು ಬರುತ್ತಿಲ್ಲ ಎಂದು ಅರಿತ ಅವರು, ಸ್ಥಳದಲ್ಲಿಯೇ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಜೊತೆಗೆ ಸಂಬಂಧಿಸಿದ ಇಲಾಖೆಗಳಿಗೆ ಕರೆ ಮಾಡಿ ಪರಿಹಾರ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬುಕ್ಕಾಪಟ್ಟಣ ಹೋಬಳಿ ಆಡಳಿತಾತ್ಮಕವಾಗಿ ಶಿರಾ ತಾಲೂಕಿಗೆ ಸೇರಿದೆ ಹಾಗೂ ಶಾಸಕಾಂಗವಾಗಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ ಅತ್ಯಂತ ಹಿಂದುಳಿದ ಹೋಬಳಿಯಾಗಿದೆ. ಈ ಹೋಬಳಿಯ ರಸ್ತೆಗಳು ಬಹಳಷ್ಟು ಹದಗೆಟ್ಟಿದ್ದು ಗುಂಡಿಗಳಿಂದ ತುಂಬಿವೆ ಆದಷ್ಟು ಶೀಘ್ರವಾಗಿ ಸಂಬಂಧ ಪಟ್ಟ ಸಚಿವರನ್ನು ಮತ್ತು ಅಧಿಕಾರಿಗಳ ಜೊತೆ ಮಾತನಾಡಿ ಉತ್ತಮ ರಸ್ತೆ ಮಾಡಿಸಲು ಕ್ರಮ ವಹಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಕುರುಬರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ೨೦೦೦೦ರು.ಗಳ ಪರಿಹಾರ ಧನದ ಚೆಕ್ ವಿತರಣೆ ಮಾಡಿದರು, ಮುಖಂಡರಾದ ಚಿ.ನಾ.ಹಳ್ಳಿ ಬಿ ಡಿ ದ್ಯಾಮಣ್ಣ, ಅಶ್ವತ್ಥನಾರಾಯಣ, ಮುಕುಂದಪ್ಪ, ಚಂದ್ರಶೇಖರ್, ಚಿಕ್ಕಣ್ಣ, ಹೊಸ ಪಾಳ್ಯ ಜೈ ಪ್ರಕಾಶ್, ಲಿಂಗಪ್ಪ ,ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಗಣ್ಣ, ಪಿಡಿಒ ಕೌಸರ್, ಸದಸ್ಯ ಮಕ್ಬೂಲ್, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.