ಸಾಲ ಮರುಪಾವತಿಸಿದರೆ ಹಣಕಾಸು ಸಂಸ್ಥೆ ಸದೃಢ: ಜಗದೀಶ ಶೆಟ್ಟರ್

| Published : Jul 13 2024, 01:32 AM IST

ಸಾರಾಂಶ

ರಾಮದುರ್ಗದ ಮರಾಠ ಅರ್ಬನ್‌ ಕೋ-ಆಪರೇಟಿವ್‌ ಸೊಸೈಟಿಯ ನೂತನ ಕಟ್ಟಡ ಹಾಗೂ ೨೪ನೇ ವಾರ್ಷಿಕ ಮಹಾಸಭೆಯನ್ನು ಸಂಸದ ಜಗದೀಶ ಶೆಟ್ಟರ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಸಾಲಗಾರರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಹಕಾರಿ ಸಂಸ್ಥೆಗಳು ಸೇರಿದಂತೆ ಹಣಕಾಸು ಸಂಸ್ಥೆ ಉಳಿದು ಬೆಳೆದು ಸದೃಢವಾಗಲು ಸಾಧ್ಯ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ರಾಮದುರ್ಗದ ಮರಾಠ ಅರ್ಬನ್‌ ಕೋ-ಆಪರೇಟಿವ್‌ ಸೊಸೈಟಿಯ ನೂತನ ಕಟ್ಟಡ ಹಾಗೂ ೨೪ನೇ ವಾರ್ಷಿಕ ಮಹಾಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಘದಲ್ಲಿ ಸಾಲ ಪಡೆದಿರುವವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದ್ದರಿಂದ ಲಾಭ ಬಂದು ಸಂಘ ಬಲಗೊಂಡಿದೆ ಎಂದು ಹೇಳಿದರು.

ಖಾಸಗಿ ಕ್ಷೇತ್ರದ ಸಂಸ್ಥೆಗಳು ದಿವಾಳಿಯಾಗುವುದು ಹೆಚ್ಚಾಗಿದೆ. ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಮಾತ್ರ ಉಳಿದುಕೊಂಡು ಪ್ರಗತಿ ಹೊಂದಿವೆ. ಸಹಕಾರಿ ಸಂಸ್ಥೆಗಳೇ ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುವ ಮರಾಠಾ ಅರ್ಬನ್‌ಕೋ-ಆಪರೇಟಿವ್‌ ಸೊಸೈಟಿ ಮುಂದಿನ ದಿನಗಳಲ್ಲಿ ಅರ್ಬನ್ ಬ್ಯಾಂಕ ಆಗಿ ಉನ್ನತ ಮಟ್ಟಕ್ಕೇರಲಿ ಎಂದು ಆಶಿಸಿದರು.

ಈ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನ ಹಾಗೂ ೫೦ವರ್ಷಕ್ಕೂ ಹೆಚ್ಚು ಕಾಲ ವೈವಾಹಿಕ ಜೀವನ ನಡೆಸಿದ ದಂಪತಿಯನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಗೋಸಾಯಿ ಭವಾನಿ ಪೀಠದ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮರಾಠ ಅರ್ಬನ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಪಿ.ಎಂ. ಜಗತಾಪ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಮೇಲೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಕೆಕೆಎಂಪಿ ಕೇಂದ್ರ ಸಮಿತಿ ಎಸ್.ಆರ್. ಸಿಂಧ್ಯಾ, ಚಂದರರಾವ್ ಜಾಧವ, ಬಲರಾಮಸಿಂಗ್‌ ಬದೋರಿಯಾ ಸೇರಿದಂತೆ ಸಮಾಜದ ಗಣ್ಯರು ಇದ್ದರು. ನವೀನ ನಲವಡೆ ಸ್ವಾಗತಿಸಿದರು. ಪ್ರೊ.ಎಸ್.ಪಿ. ಮುರಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.