ಸಹಕಾರ ಅಭಿವೃದ್ದಿ ಅಧಿಕಾರಿ ವಿಚಾರಣಾ ವರದಿಯಲ್ಲಿ ದೃಢ । ಮಾಜಿ ಶಾಸಕ ಎ.ವಿ.ಉಮಾಪತಿ ಮಾಹಿತಿ । 2 ಕೋಟಿಯಷ್ಟು ಹಣ ದುರುಪಯೋಗದ ಶಂಕೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾ ಯಾದವ(ಗೊಲ್ಲರ) ಸಂಘದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಹಾಗೂ ಅಧಿಕಾರ ದುರುಪಯೋಗಕ್ಕೆ ಪುಷ್ಠಿಗಳು ದೊರೆತಿದ್ದು ಸಹಕಾರ ಅಭಿವೃದ್ದಿ ಅಧಿಕಾರಿ ನಡೆಸಿದ ವಿಚಾರಣಾ ವರದಿಯಲ್ಲಿ ದೃಢಪಟ್ಟಿದೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಸಹಕಾರ ಅಭಿವೃದ್ದಿ ಅಧಿಕಾರಿ ಸಲ್ಲಿಸಿದ ವಿಚಾರಣಾ ವರದಿಯನ್ನು ಮಾಧ್ಯಮದವರ ಮುಂದೆ ಮಂಡಿಸಿ ಮಾಹಿತಿ ನೀಡಿದ ಮಾಜಿ ಶಾಸಕ ಎ.ವಿ.ಉಮಾಪತಿ, ಮುಂದಿನ ಕಾನೂನು ಹೋರಾಟಕ್ಕೆ ಅಣಿಯಾಗಲಾಗುತ್ತಿದೆ. ಈ ಸಂಬಂಧ ಕಾನೂನು ತಜ್ಞರ ಸಂಪರ್ಕಿಸಲಾಗಿದೆ ಎಂದರು.


ಯಾದವ ಸಂಘದ 2021-21 ಹಾಗೂ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆಗಳು ನಡೆದಿಲ್ಲ. ಆದರೂ ಜರುಗಿಸಲಾಗಿದೆ ಎಂಬ ಸುಳ್ಳು ದಾಖಲೆ ಸೃಷ್ಟಿಸಿ ಸಲ್ಲಿಸಲಾಗಿದೆ. ಸಂಘದ ಹಳೆಯ ವಿದ್ಯಾರ್ಥಿ ನಿಲಯ ನೆಲಸಮ ಮಾಡಲಾಗಿದ್ದು ಈ ಸಂಬಂಧ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಲಾಗಿಲ್ಲ. ಸಮುದಾಯ ಭವನ ನಿರ್ಮಾಣ ಮಾಡುವ ಸಂಗತಿಯ ವಾರ್ಷಿಕ ಮಹಾ ಸಭೆ ಗಮನಕ್ಕೆ ತರಲಾಗಿಲ್ಲ. ಈ ಮೊದಲು ಜಿಲ್ಲಾ ಗೊಲ್ಲರ ವಿದ್ಯಾರ್ಥಿ ನಿಲಯ ಸಂಘ ಎಂದು 1960 ರಲ್ಲಿ ನೋಂದಣಿಯಾಗಿದ್ದು ಅದನ್ನು ಜಿಲ್ಲಾ ಯಾದವ(ಗೊಲ್ಲರ) ಸಂಘ ಎಂದು ಬದಲಾಯಿಸಿ ಬೈಲಾ ತಿದ್ದುಪಡಿ ಮಾಡಲಾಗಿದೆ. ಬೈಲಾದಲ್ಲಿ ಸಮುದಾಯ ಭವನ ನಿರ್ಮಾ್ಣದ ಯಾವುದೇ ಉದ್ದೇಶಗಳಿಲ್ಲವೆಂದು ವಿಚಾರಣಾ ವರದಿಯಲ್ಲಿ ನಮೂದಿಸಲಾಗಿದೆ.

ಸಮುದಾಯ ಭವನ ನಿರ್ಮಾಣ ಮಾಡಲು 2019-20 ನೇ ಸಾಲಿನಲ್ಲಿ ಮಾಜಿ ಸಂಸದ ಹಾಗೂ ಅಂದಿನ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ 50 ಲಕ್ಷ ರು ಮಂಜೂರು ಮಾಡಿದ್ದಾರೆ. ಇದಲ್ಲದೇ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು 20 ಲಕ್ಷ ರು ಅನುದಾನ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಕಾಮಗಾರಿ ನಡೆಸಲು 52 ಲಕ್ಷ ರುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಆರಂಭವಾಗದೇ ಇದ್ದು ಕಾಮಗಾರಿ ಮೌಲ್ಯಕ್ಕಿಂತ ಹೆಚ್ಚುವರಿಯಾಗಿ 24.84 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಲೆಕ್ಕ ಪರಿಶೋಧಕರ ವರದಿಯನ್ನಾಧರಿಸಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದ ಸಿ.ಪಿ.ಮೂಡಲಗಿರಿಯಪ್ಪ ಹಾಗೂ ಇಂಜಿನಿಯರ್ ಸತೀಶ್ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂಬ ಅಂಶವ ಸಹಕಾರ ಅಭಿವೃದ್ದಿ ಅಧಿಕಾರಿಗಳ ವಿಚಾರಣಾ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

2017-18 ನೇ ಸಾಲಿನಲ್ಲಿ ಬೆಂಗಳೂರಿನ ಬಿಸಿಎಂ ಕಚೇರಿ ಖರ್ಚು ಎಂದು ಲಕ್ಷ ರು ತೋರಿಸಲಾಗಿದೆ. ಅಲ್ಲದೇ 2018-19 ಸಾಲಿನಲ್ಲಿ ಮತ್ತೆ 60 ಸಾವಿರ ಅಲ್ಲದೇ 2029 ರಲ್ಲಿ ಅಲೆಮಾರಿ ಹಾಸ್ಟೆಲ್ ವಿಚಾರವಾಗಿ ಬೆಂಗಳೂರು ಖರ್ಚು ಎಂದು 80 ಸಾವಿರ ರು ತೋರಿಸಲಾಗಿದ್ದು ಯಾವುದಕ್ಕೂ ವೋಚರ್ ಇಲ್ಲ. ಕಾರ್ಯಕಾರಿ ಸಮಿತಿ ನಡಾವಳಿ ಇಲ್ಲವೆಂಬುದ ವಿಚಾರಣಾ ವರದಿಯಲ್ಲಿ ನಮೂದಿಸಲಾಗಿದೆ ಎಂದು ಎ.ವಿ.ಉಮಾಪತಿ ತಿಳಿಸಿದರು.

ನಿವೃತ್ತ ಡಿವೈಎಸ್‌ಪಿ ಹಾಗೂ ಜಿಪಂ ಮಾಜಿ ಸದಸ್ಯ ಅಜ್ಜಪ್ಪ ಮಾತನಾಡಿ, ಸಂಘಕ್ಕೆ ಆಡಳಿತಾಧಿಕಾರಿಗಳ ನೇಮಕವಾದ ನಂತರ ಕಳೆದ ಎಂಟು ತಿಂಗಳಲ್ಲಿ ಸುಮಾರು 10 ಲಕ್ಷ ರೂಪಾಯಿ ಹಣ ಸಂಘದ ಖಾತೆಯಲ್ಲಿದೆ. ಆದರೆ ಹತ್ತು ವರ್ಷ ಆಡಳಿತ ನಡೆಸಿದವರು 30 ಸಾವಿರ ರೂಪಾಯಿ ಉಳಿಸಿರಲಿಲ್ಲ. ಕನಿಷ್ಟ ಎರಡು ಕೋಟಿ ರುಪಾಯಿಷ್ಟು ಹಣ ದುರುಪಯೋಗವಾಗಿರುವ ಶಂಕೆ ಇದೆ ಎಂದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಣ್ಣ ಗಂಜಿಗಟ್ಟೆ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಯಾದವ ಸಮಾಜದ ಮುಖಂಡ ಚಿತ್ತಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.