ಆರ್ಥಿಕ ಶಿಸ್ತು ಅಳವಡಿಕೆ ಹಾಗೂ ನಿಯಮಾವಳಿ ಪಾಲನೆಯಿಂದ ಮಾತ್ರ ಪ್ರತಿಯೊಂದು ಸೌಹಾರ್ದ ಸಹಕಾರಿ ಸಂಘಗಳು ಆರ್ಥಿಕ ಲಾಭ ಪಡೆಯಲು ಸಾಧ್ಯ.

ಅಥರ್ವ ಸೌಹಾರ್ದ ಸಹಕಾರಿ 2ನೇ ಮಹಾಸಭೆಯಲ್ಲಿ ಕೆಸಿಸಿ ಬ್ಯಾಂಕ್‌ ಸಿಇಒ

ಕನ್ನಡಪ್ರಭ ವಾರ್ತೆ ಧಾರವಾಡ

ಆರ್ಥಿಕ ಶಿಸ್ತು ಅಳವಡಿಕೆ ಹಾಗೂ ನಿಯಮಾವಳಿ ಪಾಲನೆಯಿಂದ ಮಾತ್ರ ಪ್ರತಿಯೊಂದು ಸೌಹಾರ್ದ ಸಹಕಾರಿ ಸಂಘಗಳು ಆರ್ಥಿಕ ಲಾಭ ಪಡೆಯಲು ಸಾಧ್ಯ ಎಂದು ಕೆಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುನೀತಾ ಸಿದ್ರಾಮ ಹೇಳಿದರು.

ಇಲ್ಲಿಯ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಭಾನುವಾರ ಧಾರವಾಡ ಅಥರ್ವ ಸೌಹಾರ್ದ ಸಹಕಾರಿ ಸಂಘದ 2ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಿಯಮ ಮೀರಿ ಸಾಲ ವಿತರಣೆ ಹಾಗೂ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳದೇ ಸಾಕಷ್ಟು ಸೌಹಾರ್ದ ಸಹಕಾರಿಗಳು ಬಾಗಿಲು ಮುಚ್ಚಿದ ಉದಾಹರಣೆ ಇರುವಾಗ, ಹೊಸದಾಗಿ ಆರಂಭಗೊಂಡಿರುವ ಸಹಕಾರಿಗಳು ತುಂಬ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು. ನಿಯಮಾನುಸಾರ ಸಾಲ ವಿತರಣೆ ಮಾಡಿದರೆ ಯಾವುದೇ ತೊಂದರೆಗಳಿಲ್ಲ ಎಂದ ಅವರು, ಪ್ರಸ್ತುತ ಓಣಿಗೊಂದು ಸೌಹಾರ್ದ ಸೊಸೈಟಿಗಳಾಗಿವೆ. ಇಂತಹ ಸಂದರ್ಭದಲ್ಲಿ ಅಥರ್ವ ಸೊಸೈಟಿ 500ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು ಆರ್ಥಿಕ ಶಿಸ್ತಿನೊಂದಿಗೆ ಹೋಗುತ್ತಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಇಂತಹ ಸೌಹಾರ್ದ ಸಹಕಾರಿಗಳು ಸಾಮಾನ್ಯ ಜನರಿಗೆ ತುಂಬ ಅನುಕೂಲ. ಸಣ್ಣ ವ್ಯಾಪಾರಸ್ಥರು, ಮಧ್ಯಮ ವರ್ಗದ ಜನರಿಗೆ ಈ ಸಹಕಾರಿಗಳು ಸಾಲ ನೀಡುವ ಮೂಲಕ ಅವರ ವ್ಯಾಪಾರ-ವಹಿವಾಟು ಹಾಗೂ ಆರ್ಥಿಕ ಸಬಲತೆಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೆಸಿಸಿ ಬ್ಯಾಂಕ್‌ ಇಂತಹ ಸಹಕಾರಿಗಳಿಗೆ ಅಗತ್ಯ ಆರ್ಥಿಕ ಬಲ ನೀಡುವಲ್ಲಿ ಅಥವಾ ಇನ್ನಾವುದೇ ಸಹಾಕಾರ ನೀಡುವಲ್ಲಿ ಬದ್ಧವಾಗಿದೆ ಎಂದರು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುಮಾರು ಮೂರು ದಶಕಗಳಿಂದ ನಾನು ಸಹಕಾರ ಕ್ಷೇತ್ರದಲ್ಲಿದ್ದು, ಸಹಕಾರದಿಂದ ಏನೆಲ್ಲ ಅಭಿವೃದ್ಧಿ ಆಗಬಹುದು ಎಂದು ಸಾಕಷ್ಟು ಉದಾಹರಣೆಗಳು ನಮ್ಮ ಎದುರಿಗಿವೆ. ಒಕ್ಕೂಟದ ಜವಾಬ್ದಾರಿ ವಹಿಸಿಕೊಂಡಾಗ ತಿಂಗಳಿಗೆ ಒಂದೂವರೆ ಕೋಟಿ ಹಾನಿಯಲ್ಲಿತ್ತು. ಆದರೆ, ಸಹಕಾರ ಮನೋಭಾವನೆ ಹಾಗೂ ಆರ್ಥಿಕ ಶಿಸ್ತು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಈಗ ಅದನ್ನು ಲಾಭದಲ್ಲಿ ತರಲಾಗಿದೆ. ವಾರ್ಷಿಕವಾಗಿ ₹17 ಕೋಟಿ ಲಾಭದಲ್ಲಿದ್ದು ಇತಿಹಾಸ ಎಂದರು.

ಅತಿಥಿಗಳಾದ ಗ್ರಾಹಕ ವಸ್ತುಗಳ ವಿತರಕರ ಸಂಘದ ಅಧ್ಯಕ್ಷ ಗಿರೀಶ ಸುಂಕದ, ಉಪ ಮೇಯರ್‌ ರತ್ನಾಬಾಯಿ ನಾಝರೆ, ಅನಿಸ್‌ ಸಹಕಾರ ಸಂಘದ ವಿಶು ಹೆಗಡೆ, ಪಾಲಿಕೆ ಸದಸ್ಯ ಶಂಬು ಸಾಲಿಮನಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಅಥರ್ವ ಸಹಕಾರಿ ಅಧ್ಯಕ್ಷ ಮಂಜುನಾಥ ಹಿರೇಮಠ, ಉಪಾಧ್ಯಕ್ಷ ಪ್ರಸನ್ನ ಕೊಟ್ರಗೌಡ ಮಾತನಾಡಿದರು. ಅಥರ್ವ ಸಹಕಾರಿ ಸಿಇಒ ಶ್ವೇತಾ ಹಿರೇಮಠ ವಾರ್ಷಿಕ ವರದಿ ಓದಿದರು. ಮಾರ್ತಾಂಡಪ್ಪ ಕತ್ತಿ ಕಾರ್ಯಕ್ರಮ ನಿರೂಪಿಸಿದರು. ಅಥರ್ವ ಸಹಕಾರಿ ನಿರ್ದೇಶಕರು ಇದ್ದರು.