ನಿಮ್ಮ ತಂದೆ-ತಾಯಿಗಳಲ್ಲಿ ಹಿರೋ ಕಾಣಿರಿ: ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ

| Published : Jan 15 2024, 01:45 AM IST

ನಿಮ್ಮ ತಂದೆ-ತಾಯಿಗಳಲ್ಲಿ ಹಿರೋ ಕಾಣಿರಿ: ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ -ತಾಯಿಗಳಲ್ಲಿ ನಿಮ್ಮ ಹಿರೋಗಳನ್ನು ಕಾಣುವುದು ಹೆಚ್ಚು ಸೂಕ್ತವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಲಕ್ಷ್ಮೇಶ್ವರ: ತಂದೆ -ತಾಯಿಗಳಲ್ಲಿ ನಿಮ್ಮ ಹಿರೋಗಳನ್ನು ಕಾಣುವುದು ಹೆಚ್ಚು ಸೂಕ್ತವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಸಮೀಪದ ಸೂರಣಗಿ ಗ್ರಾಮದಲ್ಲಿ ಕಳೆದ ವಾರ ನಟ ಯಶ್ ಕಟೌಟ್ ಕಟ್ಟುವ ವೇಳೆ ನಡೆದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಗಳಿಗೆ ಭಾನುವಾರ ಸಾಂತ್ವನ ಹೇಳಿ ₹2 ಲಕ್ಷದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.

ಯುವಕರು ತಮ್ಮ ನಾಯಕರ ಕಟೌಟ್ ಕಟ್ಟುವ ವೇಳೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ. ನಿಮ್ಮ ಕುಟುಂಬಗಳಿಗೆ ದೇವರು ಇಂತಹ ಶಿಕ್ಷೆ ನೀಡಬಾರದಿತ್ತು. ನಿಮ್ಮ ಕಷ್ಟದಲ್ಲಿ ನಾವು ನಿಮ್ಮ ಬೆನ್ನ ಹಿಂದೆ ಇರುತ್ತೇವೆ. ಧೈರ್ಯವಾಗಿ ಜೀವನ ಸಾಗಿಸಿ ನಿಮ್ಮೊಂದಿಗೆ ಸರ್ಕಾರ ಇರುತ್ತದೆ ಎಂದರು.

ಯುವಕರು ದುರ್ಘಟನೆಯಲ್ಲಿ ಮೃತಪಟ್ಟಿರುವುದು ಹೆಚ್ಚು ನೋವು ತರುವ ಸಂಗತಿಯಾಗಿದೆ. ಯುವಕರು ಮೃತಪಟ್ಟಿದ್ದರಿಂದ ಬಡ ಕುಟುಂಬಗಳು ಜೀವನ ಸಾಗಿಸುವುದು ಕಷ್ಟಕರ ಸಂಗತಿಯಾಗಿದೆ. ಮೃತ ಯುವಕರು ಆ ಕುಟುಂಬಗಳ ಆಸ್ತಿಯಾಗಿದ್ದರು. ಈಗ ಆ ಕುಟುಂಬಗಳು ಪಡುತ್ತಿರುವ ವೇದನೆ ಸಹಿಸಲು ಅಸಾಧ್ಯವಾಗಿದೆ. ದೇವರು ಆ ಕುಟುಂಬಗಳಿಗೆ ಕಷ್ಟ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಮೃತ ಯುವಕರು ಆ ಕುಟುಂಬಗಳಿಗೆ ಆಧಾರವಾಗಿದ್ದರು. ಈಗ ಆ ಕುಟುಂಬಗಳು ಬೀದಿಗೆ ಬಂದಿರುವುದು ನೋವು ತರಿಸಿದೆ. ದೇವರು ಆ ಕುಟುಂಬಗಳಿಗೆ ಆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ ಅವರು, ಆ ಕುಟುಂಬಗಳಿಗೆ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮವು ತಲಾ ₹1 ಲಕ್ಷಗಳ ಸಹಾಯಧನ ಹಾಗೂ ₹ 1 ಲಕ್ಷಗಳ ಸಾಲವನ್ನು ನೀಡುವ ಮೂಲಕ ಅವರ ಕುಟುಂಬ ನಿರ್ವಹಣೆಗೆ ನೀಡುತ್ತಿದೆ. ಆ ಕುಟುಂಬಗಳು ಈ ಹಣದಿಂದ ತಮ್ಮ ಬದುಕನ್ನು ಸಾಗಿಸಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಹೇಳಿದರು.

ಈ ವೇಳೆ ಕಾಂತೇಶ, ಸುನೀಲ ಮಹಾಂತಶೆಟ್ಟರ, ಫಕ್ಕಿರೇಶ ರಟ್ಟಿಹಳ್ಳಿ, ಬಸವರಾಜ ಇಟಗಿ, ಬಸವರಾಜ ಅರಳಿ, ಈರಣ್ಣ ಅಕ್ಕೂರ, ಶಿವಯೋಗಿ ಅಂಕಲಕೋಟಿ ಸೇರಿದಂತೆ ಅನೇಕರು ಇದ್ದರು.