ಸಾರಾಂಶ
ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎ.ಬಿ.ಪಾಟೀಲ, ಕಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮತ್ತಿತರರು ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಲಿಷ್ಠ ರಾಷ್ಟ್ರವಾದ ಅಮೆರಿಕಾದ ಸುಂಕ ಹೆಚ್ಚಳ ನೀತಿಯಿಂದಾಗಿ ದೇಶದ ಕೃಷಿ ಉತ್ಪನ್ನಗಳ ರಫ್ತಿಗೆ ಸವಾಲು ಉಂಟಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಪರ್ಯಾಯ ಮಾರ್ಗಗಳನ್ನು ಹುಡುಕಬೇಕು ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎ.ಬಿ. ಪಾಟೀಲ ಮನವಿ ಮಾಡಿದರು.ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ: ದೇಶದ ಕೃಷಿ ವಹಿವಾಟಿನ ಹಿತಾಸಕ್ತಿ ರಕ್ಷಣೆ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
2019 ರಿಂದ ಭಾರತವು ಕೃಷಿ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದು ಈ ಪ್ರಮಾಣವು 50 ಬಿಲಿಯನ್ ಡಾಲರ್‌ಗಳಷ್ಟಿದೆ. 2030 ರ ವೇಳೆಗೆ 100 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಿದೆ. ಪ್ರಸಕ್ತ ಸನ್ನಿವೇಶದಲ್ಲಿ ಅಮೆರಿಕಾವು ಅಧಿಕ ಸುಂಕ ವಿಧಿಸುತ್ತಿದ್ದು ಕೃಷಿ ಉತ್ಪನ್ನಗಳ ರಫ್ತಿಗೆ ಸವಾಲು ಉಂಟಾಗಿದೆ. ಪರ್ಯಾಯ ಮಾರ್ಗಗಳನ್ನು ಹುಡುಕಿ ಕೇಂದ್ರ ಸರ್ಕಾರ ರಫ್ತು ಉತ್ತೇಜಿಸಬೇಕು ಎಂದು ಕೋರಿದರು.ವ್ಯಾಪಾರ ಒಪ್ಪಂದಕ್ಕೆ ಆಸಕ್ತಿ
ಕಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾತನಾಡಿ, ಭಾರತವು ಆಸ್ಟ್ರೇಲಿಯಾ, ಯುಎಇ, ಸಿಂಗಪುರ್, ದಕ್ಷಿಣ ಕೋರಿಯಾ, ಮಾರಿಷಸ್ ಮತ್ತಿತರ ದೇಶಗಳೊಂದಿಗೆ ಮುಕ್ತ ಹಾಗೂ ಬಹುಮುಖ ವ್ಯಾಪಾರ ಒಪ್ಪಂದಕ್ಕೆ ಯಶಸ್ವಿಯಾಗಿ ಸಹಿ ಹಾಕಿದೆ. ಬದಲಾದ ಭೌಗೋಳಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಅನೇಕ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ ಎಂದು ವಿವರಿಸಿದರು.ದೇಶದಲ್ಲಿ 2024-25ನೇ ಸಾಲಿನಲ್ಲಿ 355 ಮಿಲಿಯನ್ ಟನ್ ಆಹಾರ ಧಾನ್ಯ ಮತ್ತು 367 ಮಿಲಿಯನ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸಲಾಗಿದೆ. ಮೊದಲು ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ರಫ್ತು ದೇಶವಾಗಿದೆ. ಮುಕ್ತ ವ್ಯಾಪಾರ ಒಪ್ಪಂದಗಳಿಂದ ಉಂಟಾಗುವ ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಸ್ತೃತವಾಗಿ ವಿಚಾರ ವಿನಿಮಯ ಮಾಡಲು, ದೇಶದ ಕೃಷಿ ವಹಿವಾಟನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಪೆಕ್ ಪ್ರಧಾನ ವ್ಯವಸ್ಥಾಪಕ ಡಾ.ಎಚ್.ಕೆ.ಶಿವಕುಮಾರ್, ಆರ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಬಾಲಕೆಂಚಪ್ಪ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ.ಎಸ್.ಬಿ.ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.