ತೊಗರಿ ಇಳುವರಿಗೆ ಕಾರಣ ಕಂಡು ಹಿಡಿಯಿರಿ

| Published : Jun 03 2024, 12:32 AM IST

ಸಾರಾಂಶ

ತೊಗರಿ ಈ ಭಾಗದ ಪ್ರಮುಖ ಬೆಳೆಯಾಗಿದೆ. ಕಲಬುರಗಿ ಜಿಲ್ಲೆಯ ನಂತರ ವಿಜಯಪುರ ಜಿಲ್ಲೆಯಲ್ಲಿ ತೊಗರಿಯನ್ನು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಲಬುರಗಿ ಜಿಲ್ಲೆಗಿಂತ ಕಡಿಮೆ ಇಳುವರಿ ಬರುತ್ತಿರುವ ಕಾರಣಗಳನ್ನು ಕಂಡುಹಿಡಿಯಬೇಕು ಎಂದು ಕಲಬುರಗಿ ತೊಗರಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಂಥೋನಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತೊಗರಿ ಈ ಭಾಗದ ಪ್ರಮುಖ ಬೆಳೆಯಾಗಿದೆ. ಕಲಬುರಗಿ ಜಿಲ್ಲೆಯ ನಂತರ ವಿಜಯಪುರ ಜಿಲ್ಲೆಯಲ್ಲಿ ತೊಗರಿಯನ್ನು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಲಬುರಗಿ ಜಿಲ್ಲೆಗಿಂತ ಕಡಿಮೆ ಇಳುವರಿ ಬರುತ್ತಿರುವ ಕಾರಣಗಳನ್ನು ಕಂಡುಹಿಡಿಯಬೇಕು ಎಂದು ಕಲಬುರಗಿ ತೊಗರಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಂಥೋನಿ ಹೇಳಿದರು.

ನಗರದ ಹೊರ ವಲಯದ ಹಿಟ್ಟಿನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತೊಗರಿ ಬೆಳೆಯ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ವಿಜ್ಞಾನಿಗಳು, ಜಿಲ್ಲೆಯಲ್ಲಿ ಸಾಗುವಳಿ ಯೋಗ್ಯ ಜಮೀನು ಕಡಿಮೆ ಆಳದಿಂದ, ಮಧ್ಯಮ ಹಾಗೂ ಹೆಚ್ಚು ಆಳದ ಭೂಮಿಯೆಂದು ವರ್ಗಿಕರಿಸಲಾಗಿದ್ದು, ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕನುಗುಣವಾಗಿ ತಳಿಗಳ ಆಯ್ಕೆ ಮಾಡಬೇಕು. ಅತೀ ಕಡಿಮೆ ಆಳದಿಂದ-ಕಡಿಮೆ ಆಳದ ಜಮೀನುಗಳಲ್ಲಿ ಅಲ್ಪಾವಧಿ ತಳಿಯಾದ TS-3Rನ್ನು ಸಾಲಿನಿಂದ ಸಾಲಿಗೆ ೬೦ ಸೆಂ.ಮೀ. ನಿಂದ ೫೦ ಸೆಂ.ಮೀವರೆಗೆ ಬಿತ್ತನೆ ಮಾಡಬೇಕು. ಕಡಿಮೆ ಆಳದಿಂದ-ಮಧ್ಯಮ ಆಳದ ಜಮೀನುಗಳಲ್ಲಿ TS-3R ತಳಿಯನ್ನು ಸಾಲಿನಿಂದ ಸಾಲಿಗೆ ೯೦ ಸೆಂಮೀ ಅಂತರದಲ್ಲಿ ಬಿತ್ತನೆ ಮಾಡಬೇಕು. ಮಧ್ಯಮ ಆಳದಿಂದ-ಹೆಚ್ಚಿನ ಆಳದ ಜಮೀನುಗಳಲ್ಲಿ ಮಧ್ಯಮಾವಧಿ ತಳಿಗಳಾದ GRG-152 ಹಾಗೂ ೮೧೧ ತಳಿಗಳನ್ನು ಸಾಲಿನಿಂದ ಸಾಲಿಗೆ ೧೨೦ ಸೆಂ.ಮೀ. ರಿಂದ ೧೫೦ ಸೆಂ.ಮೀ. ವರೆಗೆ ಬಿತ್ತಬೇಕು. GRG-811 ತಳಿಯನ್ನು ಜಮೀನಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹಾಗೂ ಬೆಳೆ ಸಂದೀಗ್ಧ ಹಂತಗಳಲ್ಲಿ ನೀರು ಕೊಡುವ ಅವಕಾಶ ಇದ್ದಲ್ಲಿ ಮಾತ್ರ ಬಿತ್ತಬೇಕು ಎಂದು ಸಲಹೆ ನೀಡಿದರು.

ತೊಗರಿ ಬೀಜಗಳನ್ನು ಶೇ.೨ ರಷ್ಟು ಕಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ (೨೦ ಗ್ರಾಂ. ಸುಣ್ಣ ಒಂದು ಲೀಟರ್ ನೀರಿನಲ್ಲಿ) ಒಂದು ಗಂಟೆ ನೆನೆಸಿ ೪ ಗಂಟೆ ನೆರಳಲ್ಲಿ ಒಣಗಿಸಬೇಕು. ಈ ರೀತಿ ಕಠಿಣಗೊಳಿಸಿದ ಬೀಜಗಳನ್ನು ರೈಜೋಬಿಯಂ, ರಂಜಕ, ಕರಗಿಸುವ ಗೊಬ್ಬರದಿಂದ ಉಪಚರಿಸಬೇಕು. ನೆಟೆ/ಸಿಡಿ ಹಾಯುವ ಜಮೀನುಗಳಲ್ಲಿ ಟ್ರೈಕೊಡರ್ಮಾ ಜೈವಿಕ ಗೊಬ್ಬರದಿಂದ ಪ್ರತಿ ಕೇಜಿ ಬೀಜಕ್ಕೆ ೪ ಗ್ರಾಂ ನಂತೆ ಬೀಜೋಪಚಾರ ಮಾಡಬೇಕು ಎಂದು ಹೇಳಿದರು.

ಬಿತ್ತುವಾಗ ಟ್ರ್ಯಾಕ್ಟರ್‌ ಚಾಲಿತ ಬಿ.ಬಿ.ಎಫ್ ಪ್ಲಾಂಟರ್ (ಅಗಲವಾದ ಸಾಲು ಹಾಗೂ ಹರಿ) ಪದ್ಧತಿಯಿಂದ ಬಿತ್ತಿದ್ದಲ್ಲಿ ಸಾಲಿನಿಂದ ಸಾಲಿಗೆ ೧೨೦ ಸೇಂ.ಮೀ ಹಾಗೂ ೨ ಸಾಲುಗಳ ಬದಿಯಲ್ಲಿ ಹರಿಗಳ ನಿರ್ಮಾಣವಾಗಿ ತೇವಾಂಶ ಕಾಪಾಡಿಕೊಳ್ಳಲು ಅನುಕೂಲವಾಗುವುದು. ಹೆಚ್ಚಿನ ಮಳೆ ಆದಲ್ಲಿ ನೀರು ಹರಿಗಳ ಮುಖಾಂತರ ಹರಿದು ತೇವಾಂಶ ಕಾಪಾಡಲು ಹಾಗೂ ನೇಟೆ ರೋಗ ತಡೆಗಟ್ಟಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಡಾ.ಡಿ. ಡಬ್ಲ್ಯು ರಾಜಶೇಖರ ಅವರು ಸಭೆಯಲ್ಲಿ ಮಳೆಯ ಅನಿಶ್ಚಿತತೆ, ಮಣ್ಣಿನ ಗುಣಧರ್ಮ ಕಡಿಮೆ ಸಾಲು ಅಂತರದಲ್ಲಿ ಬಿತ್ತನೆ, ಬರ ಪರಸ್ಥಿತಿ, ಕೀಟರೋಗಗಳ ಹಾವಳಿ ಇತ್ಯಾದಿಗಳ ಕುರಿತು ವರದಿ ಮಂಡಿಸಿದರು.

ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಒಣ ಬೇಸಾಯ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಮಿಲಿಂದ ಪೋತದಾರ, ಡಾ. ಎಸ್. ಎಮ್. ವಸ್ತ್ರದ, ಡಾ. ಎಸ್. ಬಿ. ಪಾಟೀಲ, ಡಾ. ಸಿ. ಡಿ. ಸೋರೆಗಾಂವಿ ಮಾತನಾಡಿದರು.

ಉಪ ಕೃಷಿ ನಿರ್ದೇಶಕರಾದ ಡಾ. ಪ್ರಕಾಶ ಚವ್ಹಾಣ, ಡಾ. ಚಂದ್ರಕಾಂತ ಪವಾರ, ಡಾ. ಬಾಲರಾಜ ಬಿರಾದಾರ, ಡಾ. ಎಸ್. ಎಸ್. ಕರಭಂಟನಾಳ, ಸಹಾಯಕ ಕೃಷಿ ನಿರ್ದೇಶಕರುಗಳಾದ ಡಾ. ಹೆಚ್. ವಾಯ್. ಸಿಂಗೆಗೋಳ, ಡಾ. ಎಸ್. ಡಿ. ಭಾವಿಕಟ್ಟಿ, ಡಾ. ಎಮ್. ಹೆಚ್. ಯರಝರಿ, ಡಾ. ಮಹಾದೇವಪ್ಪ ಏವೂರ, ಲಿಂಗರಾಜ ತಾಳಿಕೋಟಿ ಸೇರಿದಂತೆ ಮುಂತಾದವರು ಇದ್ದರು.