ಸಾರಾಂಶ
ಮರಿಯಮ್ಮನಹಳ್ಳಿ: ಲಲಿತಕಲೆಗಳು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಹೊಸಪೇಟೆಯ ಹಿರಿಯ ಸಂಶೋಧಕ ಡಾ. ಕೆ. ರವೀಂದ್ರನಾಥ ಹೇಳಿದರು.
ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ ನಡೆದ ಬಿ.ಲಿಂಗಮ್ಮ, ಡಾ.ಬಿ.ಅಂಬಣ್ಣ, ಡಿ.ದುರ್ಗಾದಾಸ್, ಗಿರಿಜಮ್ಮ ಕರಿಬಸಪ್ಪ ಅವರ ದತ್ತಿ ನೆರವಿನೊಂದಿಗೆ ಲಲಿತಕಲಾ ರಂಗದ 39ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಐರೋಪ್ಯ ಶೈಕ್ಷಣಿಕ ಸಂಪ್ರದಾಯಗಳಲ್ಲಿ ಲಲಿತಕಲೆ ಎಂದರೆ ಮುಖ್ಯವಾಗಿ ಸೌಂದರ್ಯಕ್ಕಾಗಿ ಬೆಳಸಲಾದ ಕಲೆಯಾಗಿದೆ. ಅಂದರೆ ಅವರ ದೃಷ್ಟಿಯಲ್ಲಿ ಅನ್ವಯಿಕ ಕಲೆಯಿಂದ ಭಿನ್ನವಾದ ಅಂಲಕಾರಿಕ ಕಲೆ ಎಂಬ ಸೀಮಿತ ಅರ್ಥದಲ್ಲಿ ಭಾವಿಸಲಾಗಿದೆ. ಆದರೆ ಭಾರತೀಯ ಕಲಾವಿದನ ಕಲ್ಪನೆಯ ಸೃಜನಶೀಲವಾದ ಸಂಪೂರ್ಣ ಅಭಿವ್ಯಕ್ತಿ ಮತ್ತು ಪ್ರದರ್ಶನವನ್ನೊಳಗೊಂಡಿರುವುದು ಲಲಿತಕಲೆಯೆನಿಸಿದೆ ಎಂದು ಅವರು ವಿವರಿಸಿದರು.
ಲಲಿತಕಲೆಗಳಲ್ಲಿ ಮುಖ್ಯವಾಗಿ ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ಕಾವ್ಯಗಳ ಜೊತೆಗೆ ಪ್ರದರ್ಶನ ಕಲೆಗಳಾದ ನಾಟಕ, ಹಾಗೂ ನೃತ್ಯಗಳು ಪ್ರಧಾನವಾಗಿದೆ. ಕಳೆದ 40 ವರ್ಷಗಳಿಂದ ಗ್ರಾಮೀಣ ಪರಿಸರದಲ್ಲಿ ಕಲಾವಿದರನ್ನು ಒಗ್ಗೂಡಿಸಿಕೊಂಡು ಕಲಾವಿದರ ಕಲಾಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ ಕಲಾವಿದನ್ನು ಬೆಳೆಸಿದ ಕೀರ್ತಿ ಮರಿಯಮ್ಮನಹಳ್ಳಿಯ ಲಲಿತಕಲಾ ರಂಗಕ್ಕೆ ಸಲ್ಲುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.2023-24ನೇ ಸಾಲಿನ ಪದ್ಮರಾಜ್ ಜೈನ್, ನೇಮಿರಾಜ್ ಜೈನ್ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿಧಿ ಪ್ರಶಸ್ತಿಯನ್ನು ಸ್ವೀಕರಿಸಿದ ಮರಿಯಮ್ಮನಹಳ್ಳಿಯ ಹಿರಿಯ ರಂಗಕಲಾವಿದೆ ಸಿ. ಗಂಗಮ್ಮ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗನಿರ್ದೇಶಕ ಬಿ.ಎಂ.ಎಸ್. ಪ್ರಭು, ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಹೊಂದಿರುವ ಜಿ. ನಾಗಲಾಪುರದ ಡಿ. ವಿ. ಪ್ರಸನ್ನ ಕುಮಾರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಿವೃತ್ತ ಶಿಕ್ಷಕ ಬಿ.ಎಂ.ಎಸ್. ಮೃತ್ಯುಜಯ ಸಮಾರಂಭದ ಅಧ್ಯಕ್ಷತೆವಹಿಸಿಕೊಂಡು ಸಭೆಯಲ್ಲಿ ಮಾತನಾಡಿದರು.
ಮರಿಯಮ್ಮನಹಳ್ಳಿಯ ಹಿರಿಯ ವೈದ್ಯ ಡಾ.ಬಿ. ಅಂಬಣ್ಣ, ಉದ್ಯಮಿ ಎಂ.ಕೀರ್ತಿರಾಜ್ ಜೈನ್, ನಿವೃತ್ತ ಶಿಕ್ಷಕ ಕೆ. ಕರಿಬಸಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು.ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ. ರಾಮಚಂದ್ರಪ್ಪ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಕೊಟ್ಗಿ ಹಾಲೇಶ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಿ.ಎಂ. ಮಾನ್ಯತ ಪ್ರಾರ್ಥಿಸಿದರು.ಕೆ. ಮಲ್ಲನಗೌಡ ಸ್ವಾಗತಿಸಿದರು. ಬಿ.ಎಂ. ಅಷ್ಠಾವರ್ಣ ವಾರ್ಷಿಕವರದಿ ವಾಚಿಸಿದರು. ಜಿ. ಎಂ. ಕೊಟ್ರೇಶ್ ಸನ್ಮಾನಿತರನ್ನು ಪರಿಚಯಿಸಿದರು. ಸಿ.ಕೆ. ನಾಗರಾಜ ವಂದಿಸಿದರು. ವಿ. ಶೋಭಾ ನಿರೂಪಿಸಿದರು.ಸಭೆಯ ನಂತರ ಗೊ.ರು. ಚನ್ನಬಸಪ್ಪ ರಚಿಸಿರುವ, ಕೆ. ಶಿವರುದ್ರಯ್ಯ ನಿರ್ದೇಶನ, ಮ.ಬ.ಸೋಮಣ್ಣ ಮಾರ್ಗದರ್ಶನ, ಹ್ಯಾಟಿ ಮಂಜುನಾಥ ಸಹ ನಿರ್ದೇಶನದಲ್ಲಿ ಬೆಳ್ಳಕ್ಕಿ ಹಿಂಡು ಬೆದರ್ಯೋವೋ ನಾಟಕ ಪ್ರದರ್ಶನಗೊಂಡಿತು.