ಸಾರಾಂಶ
ಠೇವಣಿ ಇಟ್ಟ ದಿನಾಂಕಗಳಿಂದ ಬಡ್ಡಿಯೊಂದಿಗೆ ಲೆಕ್ಕ ಹಾಕಿ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ.
ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಬೈಲಹೊಂಗಲದ ಕಿತ್ತೂರುರಾಣಿ ಚೆನ್ನಮ್ಮ ಕೋ-ಆಪರೇಟಿವ್ ಸೊಸೈಟಿಗೆ ಇಲ್ಲಿಯ ಗ್ರಾಹಕರ ಆಯೋಗವು ದಂಡ ವಿಧಿಸಿ ಮತ್ತು ಪರಿಹಾರಕ್ಕೆ ಆದೇಶ ಮಾಡಿದೆ.
ಹುಬ್ಬಳ್ಳಿಯ ಜವಳಿ ಸಾಲಿನ ನಿವಾಸಿ ಗೀತಾ ಮತ್ತು ಅವರ ಪತಿ ಶಿವಪ್ಪ ಜವಳಿ ಹುಬ್ಬಳ್ಳಿಯ ಸಿಬಿಟಿಯಲ್ಲಿರುವ ಎದುರುದಾರರ ಸೊಸೈಟಿ ಶಾಖೆಯಲ್ಲಿ ₹1.70 ಲಕ್ಷ ಮತ್ತು ₹3.70 ಲಕ್ಷ ಮೊತ್ತವನ್ನು ಖಾಯಂ ಠೇವಣಿ ಇಟ್ಟಿದ್ದರು. ಆ ಠೇವಣಿ ಅವಧಿ 2026ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ, ಆರೋಗ್ಯ ಸಮಸ್ಯೆಯಿಂದ ತಾವು ಇಟ್ಟಿದ್ದ ಠೇವಣಿ ಹಣ ಕೊಡುವಂತೆ ಸೊಸೈಟಿಗೆ ಕೇಳಿದ್ದಾರೆ. ಠೇವಣಿ ಹಣ ಕೊಡದ ಹಿನ್ನೆಲೆಯಲ್ಲಿ ಗೀತಾ ಹಾಗೂ ಶಿವಪ್ಪ ದಂಪತಿ ಗ್ರಾಹಕರ ಆಯೋಗದ ಎದುರು ಬಂದಿದ್ದಾರೆ.ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ಬೋಳಶೆಟ್ಟಿ, ದೂರುದಾರರು ಠೇವಣಿ ರೂಪದಲ್ಲಿ ಇಟ್ಟ ಹಣವನ್ನು ಸೊಸೈಟಿಯ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದ್ದಾಗ, ಮರಳಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಎಂದು ಆಯೋಗ ತೀರ್ಪು ನೀಡಿದೆ.
ಠೇವಣಿ ಇಟ್ಟ ದಿನಾಂಕಗಳಿಂದ ಬಡ್ಡಿಯೊಂದಿಗೆ ಲೆಕ್ಕ ಹಾಕಿ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಜತೆಗೆ ಸೇವಾ ನ್ಯೂನ್ಯತೆಯಿಂದ ಅವರಿಗೆ ಆಗಿರುವ ಅನಾನುಕೂಲತೆ, ತೊಂದರೆ ಹಾಗೂ ಮಾನಸಿಕ ಹಿಂಸೆಗೆ ತಲಾ ₹50 ಸಾವಿರ ಪರಿಹಾರ ಹಾಗೂ ತಲಾ ₹10 ಸಾವಿರ ಪ್ರಕರಣದ ಖರ್ಚು, ವೆಚ್ಚ ನೀಡಲು ಸೊಸೈಟಿಗೆ ಆದೇಶಿಸಿದೆ.