ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಸಾಂಕ್ರಾಮಿಕ ರೋಗಗಳಾದ ಡೆಂಘೀ ಮತ್ತು ಮಲೇರಿಯಾದ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿಯ ವಾಸದ ಮನೆಗಳಿಗೂ ರಾಜ್ಯ ಆರೋಗ್ಯ ಇಲಾಖೆ ದಂಡ ಪ್ರಯೋಗಕ್ಕೆ ಸುತ್ತೋಲೆ ಹೊರಡಿಸಿದೆ. ಜಿಲ್ಲಾಧಿಕಾರಿ ನೇತೃತ್ವದ ಸಭೆಯ ಬಳಿಕ ಈ ಬಗ್ಗೆ ನಿರ್ಧಾರವಾಗಲಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಭಂಡಾರಿ ತಿಳಿಸಿದ್ದಾರೆ.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳೂರು ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಪ್ರಥಮ ತ್ರೈಮಾಸಿಕ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.ತಾ.ಪಂ.ನ ನಗರ ಹಾಗೂ ಗ್ರಾಮಾಂತರ ಭಾಗ ಸೇರಿ ಈ ವರ್ಷ ಈವರೆಗೆ 620 ಶಂಕಿತ ಡೆಂಘೀ ಪ್ರಕರಣಗಳು ವರದಿಯಾಗಿದ್ದು, 66 ದೃಢಪಟ್ಟಿವೆ. ಲೇಡಿಹಿಲ್, ಬಂದರು, ಕುಳಾಯಿ ಹಾಗೂ ಬೈಕಂಪಾಡಿ ಕೈಗಾರಿಕಾ ವಲಯ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 25 ಮಂದಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು 100 ದಿನ ಲಾರ್ವಾ ಸಮೀಕ್ಷೆ ನಡೆಸಿದ್ದರು. ಈ ಬಾರಿಯೂ 25 ಮಂದಿ ಮಕ್ಕಳು ಮುಂದೆ ಬಂದಿದ್ದು, ಗೌರವಧನದ ಆಧಾರದಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಜನರ ನಿರ್ಲಕ್ಷ್ಯ ಕಂಡು ಬರುತ್ತಿದ್ದು, ಶೇ. 40ರಷ್ಟು ವಲಸೆ ಕಾರ್ಮಿಕರ ಮೂಲಕವೇ ಈ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈವರೆಗೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡುಬಂದಾಗ ದಂಡ ಹಾಕಲಾಗುತ್ತಿತ್ತು ಎಂದರು.
ಇಲಿಜ್ವರ ಪ್ರಕರಣ ಪತ್ತೆ:ಈ ಬಾರಿ ಮಳೆ ಹೆಚ್ಚಾಗಿ ಸುರಿದಿರುವ ಕಾರಣ ತಾಲೂಕು ವ್ಯಾಪ್ತಿಯಲ್ಲಿ ಇಲಿ ಜ್ವರ ಪ್ರಕರಣಗಳೂ ವರದಿಯಾಗುತ್ತಿವೆ. ಈಗಾಗಲೇ 8 ಪ್ರಕರಣಗಳು ವರದಿಯಾಗಿದೆ. ಗಂಭೀರವಾಗಿಲ್ಲವಾದರೂ ಕ್ರಮ ವಹಿಸಲಾಗುತ್ತಿದೆ ಎಂದು ಡಾ. ಸುಜಯ್ ಭಂಡಾರಿ ಹೇಳಿದರು.
ಹಾಲು ಉತ್ಪಾದನೆಯಲ್ಲಿ ಏರಿಕೆ: ಮಂಗಳೂರು ತಾಲೂಕು ವ್ಯಾಪ್ತಿಯ 20 ಸೊಸೈಟಿಗಳ ತ್ರೈಮಾಸಿಕ 6.56 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಏರಿಕೆ ಕಂಡು ಬಂದಿದೆ. ಆರು ತಿಂಗಳ ಹಿಂದೆ ಇದು 3.50 ಲಕ್ಷ ಲೀಟರ್‌ಗೆ ಇಳಿಕೆಯಾಗಿತ್ತು. ಹಾಲಿನ ದರ ಏರಿಕೆಯಾಗಿ, ಸೈಲೇಜ್ ಒದಗಿಸುವುದು ಹಾಗೂ ಇರೋಡ್‌ನಿಂದ ದನಗಳನ್ನು ಖರೀದಿಸಿ ಹೈನುಗಾರರಿಗೆ ಪ್ರೋತ್ಸಾಹಿಸುತ್ತಿರುವ ಕಾರಣ ಉತ್ಪಾದನೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಹಿತಿ ನೀಡಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ಇದ್ದರು.--------
ಸೊಳ್ಳೆ ಉತ್ಪತ್ತಿ ತಾಣಕ್ಕೆ ಎಷ್ಟೆಷ್ಟು ದಂಡ?ಇದೀಗ ಆರೋಗ್ಯ ಇಲಾಖೆಯು ಸೊಳ್ಳೆ ಉತ್ಪತ್ತಿಯಾಗುವ ಮನೆಗಳಿಗೆ ಸೇರಿದಂತೆ ದಂಡ ವಿಧಿಸಲು ಸುತ್ತೋಲೆ ಹೊರಡಿಸಿದೆ. ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪ್ರಥಮ ಹಂತದಲ್ಲಿ ನೋಟೀಸು ನೀಡಿ ಬಳಿಕವೂ ಕ್ರಮ ಆಗದಿದ್ದರೆ ದಂಡ ವಿಧಿಸಲಾಗುವುದು. ಸುತ್ತೋಲೆ ಪ್ರಕಾರ ವಸತಿ ಮನೆಗಳಿಗೆ ನಗರದಲ್ಲಿ 400 ರು., ಗ್ರಾಮಾಂತರ 200 ರು., ವಾಣಿಜ್ಯ ತಾಣಗಳಿಗೆ ನಗರ 1,000 ರು., ಗ್ರಾಮಾಂತರ 500 ರು., ನಿರ್ಮಾಣ ಹಂತದ ಕಟ್ಟಡಗಳು, ಖಾಲಿ ಜಾಗಗಳಿಗೆ ನಗರದಲ್ಲಿ 2,000 ರು. ಹಾಗೂ ಗ್ರಾಮಾಂತರದಲ್ಲಿ 1,000 ರು. ದಂಡ ವಿಧಿಸಲು ನಿಯಮ ರೂಪಿಸಲಾಗಿದೆ ಎಂದು ಡಾ. ಸುಜಯ ಭಂಡಾರಿ ವಿವರ ನೀಡಿದರು.