ನಕಲಿ ವೈದ್ಯರ ಮೇಲೆ ಎಫ್‍ಐಆರ್: ನೋಟಿಸ್‌ ಜಾರಿ

| Published : Aug 07 2025, 12:45 AM IST

ಸಾರಾಂಶ

ನಾಲ್ಕು ದಿನಗಳ ಹಿಂದೆ ನಕಲಿ ವೈದ್ಯರೊಬ್ಬರ ಮೇಲೆ ದಾಳಿ ನಡೆಸಿ, ಕೆಲ ಆಸ್ಪತ್ರೆಗಳಿಗೆ ಬೀಗ ಹಾಕಿರುವುದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ನಾಲ್ಕು ದಿನಗಳ ಹಿಂದೆ ನಕಲಿ ವೈದ್ಯರೊಬ್ಬರ ಮೇಲೆ ದಾಳಿ ನಡೆಸಿ, ಕೆಲ ಆಸ್ಪತ್ರೆಗಳಿಗೆ ಬೀಗ ಹಾಕಿರುವುದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಆಸ್ಪತ್ರೆಯನಿಟ್ಟು ಕೊಂಡಿದ್ದ ಮೂವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ, 10 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ಸುಶೀಲ ಕುಮಾರ ಅಂಬುರೆ ಹೇಳಿದ್ದಾರೆ.

ಹೊರಗಿನ ಕೆಲ ವ್ಯಕ್ತಿಗಳ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ.

ಟಿಎಚ್‍ಒ ಕ್ರಮದ ಹಿನ್ನೆಲೆ ಪಟ್ಟಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ (ಟಿಎಚ್‍ಒ) ನೇತೃತ್ವದಲ್ಲಿ ಕೆಲವು ದಿನಗಳಲ್ಲಿ ನಡೆದಿರುವ ಆರ್‌ಎಂಪಿ ವೈದ್ಯರ ವಿರುದ್ಧದ ದಾಳಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹೆಸರು ಹೇಳಲು ಇಚ್ಛಿಸದ ಪ್ರಥಮ ಚಿಕಿತ್ಸಕರೊಬ್ಬರು, “ಬಂಗಾಲಿಯಿಂದ ನಕಲಿ ವೈದ್ಯರು ಬಂದು ಇಲ್ಲಿ 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮವಿಲ್ಲ. ಬದಲಾಗಿ, 50ರಿಂದ 100 ರೂಪಾಯಿ ಖರ್ಚಿನಲ್ಲಿ ಗ್ರಾಮೀಣ ಜನರಿಗೆ ಸೇವೆ ನೀಡುವ ನಮ್ಮಂತಹ ಆರ್‌ಎಂಪಿ ವೈದ್ಯರ ಮೇಲೆ ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದಾರೆ,” ಎಂದು ದೂರಿದ್ದಾರೆ.

ವೃತ್ತಿ ಬಿಟ್ಟ ವೈದ್ಯರೊಂದಿಗೆ ಏಕೆ ಸಂವಾದ?: ಟಿಎಚ್‍ಒ ಅವರು ಇತ್ತೀಚೆಗೆ 62ವರ್ಷ ವಯಸ್ಸಿನ ನಿವೃತ್ತ ಆರ್‌ಎಂಪಿಗೆ ಕರೆ ಮಾಡಿ, “ನೀನು ಇನ್ನೂ ಅನಧಿಕೃತ ವೈದ್ಯಕೀಯ ಸೇವೆ ನೀಡುತ್ತೀಯಾ?” ಎಂದು ಪ್ರಶ್ನಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ತಕ್ಷಣವೇ ಆ ವೈದ್ಯರು, “ಇತ್ತೀಚೆಗೆ ವೈದ್ಯಕೀಯ ಸೇವೆ ಬಿಟ್ಟು ಹೊಲದ ಕೆಲಸದಲ್ಲಿ ತೊಡಗಿದ್ದೇನೆ” ಎಂದು ಉತ್ತರಿಸಿದರಂತೆ, ಟಿಎಚ್‍ಒ ಅವರು, “ಅದನ್ನು ಲಿಖಿತವಾಗಿ ನೀಡು” ಎಂದು ಕೇಳಿದ್ದರೆನ್ನಲಾಗಿದೆ. ನಂತರ ಮತ್ತೆ ಅವರಿಂದ ಸಂಪರ್ಕವಾಗಿಲ್ಲವೆಂದು ಹೆಸರು ಬಳಸಲಿಚ್ಚಿಸಿದ ಆರ್‌ಎಂಪಿ ತಿಳಿಸಿದ್ದಾರೆ.

ಮೂವರು ನಕಲಿ ವೈದ್ಯರ ಮೇಲೆ ಎಫ್‍ಐಆರ್: ಕಲಬುರಗಿ ವ್ಯಕ್ತಿಯೊಬ್ಬರು ದೂರು ನೀಡಿದರ ಆಧಾರದ ಮೇಲೆ ಮೂವರು ನಕಲಿ ಆಸ್ಪತ್ರೆಗಳ ವ್ಯಕ್ತಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದಕ್ಕೆ ಹೊರತಾಗಿ ಆಸ್ಪತ್ರೆಯ ಪರವಾನಿಗೆ ವೈದ್ಯರಿಗೆ ಅವ್ಯವಸ್ಥೆ ಕಂಡು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಇಬ್ಬರಿಗೆ ನೋಟಿಸ್ ನೀಡಲಾಗಿದೆ.

----------

ಇನ್ನೂ 8-10ಜನರ ನಕಲಿ ವೈದ್ಯರ ಪಟ್ಟಿ ಇದೆ. ಅಲ್ಲದೆ ಇಂಥ ಪ್ರಕರಣಗಳ ಬಗ್ಗೆ ಸಾರ್ವಜನಿಕರು ದೂರು ಕೊಟ್ಟರೆ ಉಳಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ದಿನಕ್ಕೆ ಒಂದೂ ಅಥವಾ ಎರಡನ್ನೂ ಮಾತ್ರ ಪರಿಶೀಲಿಸಬಹುದಾಗಿದೆ.

-ಸುಶೀಲ್‌ ಕುಮಾರ ಅಂಬುರೆ, ತಾಲೂಕು ಆರೋಗ್ಯಾಧಿಕಾರಿಗಳು ಆಳಂದ