ಉತ್ತರ ಖಂಡ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿ ಹೋದ ಬಳಿಕ ವೇದಿಕೆಯನ್ನು ಶುದ್ಧೀಕರಣಗೊಳಿಸಿರುವ ಬಿಜೆಪಿಯವರ ನಡೆ ಅಮಾನವೀಯ. ಸಂವಿಧಾನ ವಿರೋಧಿ. ಇಂತಹ ಆಚರಣೆಗಳನ್ನು ಬೆಂಬಲಿಸುವ ಬಿಜೆಪಿಯವರಿಂದ ದೇಶದ ಅಭಿವೃದ್ಧಿ ಅಸಾಧ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಹುಲ್‌ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಎನ್‌ಡಿಎ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಪಕ್ಷದ ಕಾರ್ಯಕರ್ತರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗಿದರು. ಸಂವಿಧಾನ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಉತ್ತರ ಖಂಡ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿ ಹೋದ ಬಳಿಕ ವೇದಿಕೆಯನ್ನು ಶುದ್ಧೀಕರಣಗೊಳಿಸಿರುವ ಬಿಜೆಪಿಯವರ ನಡೆ ಅಮಾನವೀಯ. ಸಂವಿಧಾನ ವಿರೋಧಿ. ಇಂತಹ ಆಚರಣೆಗಳನ್ನು ಬೆಂಬಲಿಸುವ ಬಿಜೆಪಿಯವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಖರ್ಗೆ ಅವರಿಗೆ ಆದ ಅವಮಾನವನ್ನು ಖಂಡಿಸಿ ಮಾತನಾಡಿದ ರಾಹುಲ್‌ಗಾಂಧಿ ವಿರುದ್ಧ ಸುಳ್ಳು ದೂರು ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಟೀಕಿಸಿದರು.ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರ. ಇದನ್ನು ದೇಶದಿಂದ ತೊಲಗಿಸಬೇಕು. ಜಾತ್ಯತೀತ ತತ್ವಗಳನ್ನು ಮೈಗೂಡಿಸಿಕೊಂಡಿರುವ, ದೇಶದ ಬಗ್ಗೆ ಕಾಳಜಿ ಇರುವಂತಹ ರಾಹುಲ್‌ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿ ಸಂವಿಧಾನಕ್ಕೆ ಅನುಗುಣವಾಗಿ ದೇಶ ಮುನ್ನಡೆಸಲು ಅನುವು ಮಾಡಿಕೊಡಬೇಕು. ಎನ್‌ಡಿಎ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆ ಮುಂದುವರೆಯಲಿದೆ. ತಕ್ಷಣವೇ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಾಶಗೊಳಿಸಲು ಹೊರಟಿದ್ದಾರೆ. ಎನ್‌ಡಿಎ ಸರ್ಕಾರ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವು ಸಾಧ್ಯವಿಲ್ಲ. ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ. ೨೦೨೯ರ ಚುನಾವಣೆಯಲ್ಲಿ ದೇಶದ ಜನರೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೀಲಾರ ರಾಧಾಕೃಷ್ಣ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾಧ್ಯಕ್ಷೆ ಶುಭದಾಯಿನಿ, ಚಂದಗಾಲು ವಿಜಯ್‌ಕುಮಾರ್, ಸಿ.ಎಂ.ದ್ಯಾವಪ್ಪ, ಶ್ರೀಧರ್, ಅಜ್ಜಹಳ್ಳಿ ರಾಮಕೃಷ್ಣ, ಚಿನಕುರಳಿ ರಮೇಶ್, ಸುಂಡಹಳ್ಳಿ ಮಂಜುನಾಥ, ಹನ್ಸಿಯಾಬಾನು, ಕಮಲಾರಾಜು, ವೀಣಾ, ಪದ್ಮ, ಯಶೋದಾ ಮೊದಲಾದವರಿದ್ದರು.