ಬಿರು ಬಿಸುಲಿನ ನಡುವೆ ಹೆಚ್ಚಾಗುತ್ತಿವೆ ಬೆಂಕಿ ಅವಘಡ

| Published : May 03 2024, 01:01 AM IST

ಬಿರು ಬಿಸುಲಿನ ನಡುವೆ ಹೆಚ್ಚಾಗುತ್ತಿವೆ ಬೆಂಕಿ ಅವಘಡ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕೇ ತಿಂಗಳಲ್ಲಿ ತಾಲೂಕಿನಾದ್ಯಂತ ಒಟ್ಟು 199 ಬೆಂಕಿ ಅವಘಡ, ತೀವ್ರ ಬರದ ನಡುವೆ ಈ ವರ್ಷದ ಭಾರೀ ಬಿಸಿಲು ಬೆಂಕಿ ಪ್ರಕರಣಗಳಿಗೆ ಕಾರಣ

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಜನವರಿಯಿಂದ ಏಪ್ರಿಲ್‌ವರೆಗೆ ಬರೋಬ್ಬರಿ 199 ಅಗ್ನಿ ಕರೆಗಳು. 80 ಲಕ್ಷಕ್ಕೂ ಹೆಚ್ಚು ನಷ್ಟ. ಏಪ್ರಿಲ್‌ ಒಂದೇ ತಿಂಗಳಲ್ಲಿ 38 ಕರೆ, 30 ದಿನಕ್ಕೆ ಸುಮಾರು 13 ಲಕ್ಷ 80 ಸಾವಿರ ರು. ಆಸ್ತಿ ಬೆಂಕಿಗಾಹುತಿ. ಇದು ತಾಲೂಕಿನಲ್ಲಿ ಕಂಡರಿಯದ ಬಿರು ಬಿಸುಲಿನ ನಡುವೆಯೇ ಆದ ಬೆಂಕಿ ದುರಂತಗಳ ವಿವರ. ಹೌದು ಬಿಸಿಲು ಊಹಿಸಲೂ ಅಸಾಧ್ಯದ ಸ್ಥಿತಿಯಲ್ಲಿದೆ. ಬಿಸಿಲು ದ್ವೇಷ ಸಾಧಿಸುವ ರೀತಿಯಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಜನರು ಕಂಗೆಟ್ಟು ಕುಳಿತಿದ್ದಾರೆ. ಜೊತೆಗೆ ಬರಗಾಲ ಬೇರೆ. ಅತೀ ಹೆಚ್ಚಿನ ಬಿಸಿಲಿನಿಂದಾಗಿ ಸಣ್ಣ ಪುಟ್ಟ ಅಗ್ನಿ ಘಟನೆಗಳು ದೊಡ್ಡ ಘಟನೆಗಳಾಗಿ ಮಾರ್ಪಡುತ್ತಿವೆ. ತೀವ್ರ ಬರ ಮತ್ತು ಬಿರು ಬಿಸಿಲಿನಿಂದಾಗಿ ಅನೇಕ ಕಡೆ ಅಡಕೆ-ತೆಂಗು ತೋಟಗಳು ಒಣಗಿವೆ. ಬೆಂಕಿಯ ಒಂದು ಸಣ್ಣ ಕಿಡಿ ಬಿದ್ದರೂ ಇಡೀ ಪ್ರದೇಶಕ್ಕೆ ವ್ಯಾಪಿಸಿ ಅಪಾರ ನಷ್ಟ ತಂದಿಡುತ್ತಿವೆ. ಪದೇಪದೆ ಅಗ್ನಿ ದುರಂತ ವರದಿಯಾಗುತ್ತಲೇ ಇವೆ. ಅಡಿಕೆ, ತೆಂಗು, ಕುರಿ ಶೆಡ್, ಗುಡಿಸಲು, ಅರಣ್ಯ ಪ್ರದೇಶ, ತೆಂಗಿನ ನಾರಿನ ಘಟಕ, ಗುಡ್ಡದ ಒಣ ಹುಲ್ಲು ಹೀಗೆ ಬೆಂಕಿ ಕೆನ್ನಾಲಿಗೆ ಉದ್ದವಾಗುತ್ತಲೇ ಇದೆ. ಇಷ್ಟೆಲ್ಲಾ ಅವಘಡಗಳ ನಡುವೆಯೂ ಅಗ್ನಿಶಾಮಕ ದಳದ ಸಿಬ್ಬಂದಿ ಹೋರಾಟದ ಫಲವಾಗಿ ಒಂದು ಕೋಟಿಗೂ ಅಧಿಕ ಮೊತ್ತದ ನಷ್ಟ ತಪ್ಪಿದೆ.

ಮಾರಿಕಣಿವೆ ಚೆಕ್ ಡ್ಯಾಮ್‌ನಲ್ಲಿ ಒಬ್ಬರು, ಬುರುಡುಕುಂಟೆ ಹೊಳೆಯಲ್ಲಿ ಒಬ್ಬರು ಸೇರಿ ಇಬ್ಬರು ಅಸುನೀಗಿದ ಎರಡು ರಕ್ಷಣಾ ಕರೆಗಳು ಬಂದಿದ್ದು, ಏಪ್ರಿಲ್ ತಿಂಗಳೊಂದರಲ್ಲೇ ಸುಮಾರು 15 ಲಕ್ಷದ 20 ಸಾವಿರ ರು.ದಷ್ಟು ಆಸ್ತಿ ಬೆಂಕಿಯಿಂದ ಉಳಿಸಲಾಗಿದೆ. 2019ರಲ್ಲಿ 188 ಅಗ್ನಿ ಅವಘಡ, 2023ರಲ್ಲಿ 394 ಅಗ್ನಿ ಅವಘಡಗಳಾಗಿದ್ದು 2024ರಲ್ಲಿ ಕಳೆದ ನಾಲ್ಕೇ ತಿಂಗಳಲ್ಲಿ ಬರೋಬ್ಬರಿ 199 ಅಗ್ನಿ ಪ್ರಕರಣ ವರದಿಯಾಗಿವೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ. ನಗರ ಭಾಗಕ್ಕಿಂತ ಗ್ರಾಮೀಣ ಭಾಗಗಳಲ್ಲೇ ಅತೀ ಹೆಚ್ಚಿನ ಅಗ್ನಿ ದುರಂತ ಸಂಭವಿಸಿವೆ.

ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರುವುದು ಒಳಿತು. ಹೊಲ, ಬದು ಮುಂತಾದ ಒಣ ಹುಲ್ಲುಗಳಿರುವಲ್ಲಿ ಬೆಂಕಿ ಹಚ್ಚುವಾಗ ಎಚ್ಚರ ವಹಿಸಬೇಕು. ಗ್ಯಾಸ್ ಒಲೆ ಹಚ್ಚಿ ಆರಿಸದೆ ಬಿಡಬಾರದು. ಬೀಡಿ, ಸಿಗರೇಟ್ ಸೇದಿದ ಮಂದಿ ಕೊನೆಯ ಭಾಗ ಎಸೆಯುವಾಗ ಬೆಂಕಿ ಆರಿಸುವಲ್ಲಿ ನಿರ್ಲಕ್ಷ್ಯ ತೋರಬಾರದು. ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಬಿಸಿಲಲ್ಲಿ ನಿಲ್ಲಿಸಿ ಕಾದ ವಾಹನಗಳ ಚಾಲನೆಯಂತಹ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ತಿಪ್ಪೆಗಳಿಗೆ ಬೂದಿ ಸುರಿಯುವಾಗ ಬೆಂಕಿ ಸಂಪೂರ್ಣ ಆರಿಸಿ ಸುರಿಯುವಂತಹ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು ಎನ್ನುತ್ತಾರೆ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಸುಬಾನ್ ಸಾಬ್. ಒಟ್ಟಿನಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಗ್ನಿ ದುರಂತಗಳ ಸಂಖ್ಯೆ ಹೆಚ್ಚುತ್ತಿದ್ದು ಸಾರ್ವಜನಿಕರು ಆದಷ್ಟು ಮುಂಜಾಗರೂಕತೆ ವಹಿಸಬೇಕಾಗಿದೆ.ತಾಲೂಕಿನ ಅಗ್ನಿ ಶಾಮಕ ಠಾಣೆಯಲ್ಲಿ ಸದ್ಯಕ್ಕೆ ಒಂದೇ ಅಗ್ನಿ ಶಾಮಕ ವಾಹನವಿದ್ದು, ಅದರಲ್ಲೇ ಇಡೀ ತಾಲೂಕು ಗಮನಿಸಬೇಕಿದೆ. ಅಗ್ನಿ ಶಾಮಕ ಠಾಣೆ ಕೊಳವೆಬಾವಿಯಲ್ಲಿ ನೀರಿನ ತೊಂದರೆ ಇರುವುದರಿಂದ ಪಂಪ್ ಹೌಸ್‌ಗೆ ಹೋಗಿ ಅಗ್ನಿ ಶಾಮಕ ವಾಹನಕ್ಕೆ ನೀರು ತುಂಬಿಸಬೇಕಾಗಿದೆ. ತಾಲೂಕಿಗೆ ಮತ್ತೊಂದು ಅಗ್ನಿಶಾಮಕ ವಾಹನ ಮತ್ತು ನೀರಿಗಾಗಿ ಕೊಳವೆ ಬಾವಿ ತುರ್ತು ಅವಶ್ಯಕತೆಯಿದ್ದು ಸಂಬಂಧಪಟ್ಟವರು ಅವುಗಳನ್ನು ಒದಗಿಸುವತ್ತ ಕ್ರಮ ಕೈಗೊಂಡರೆ ಅಗ್ನಿ ಪ್ರಕರಣ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.