ನಗರದ ಹೊರವಲಯದ ಶಿರವಾಡದಲ್ಲಿರುವ ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಕಾರವಾರ:
ನಗರದ ಹೊರವಲಯದ ಶಿರವಾಡದಲ್ಲಿರುವ ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗೆ ಬಿದ್ದ ಬೆಂಕಿ ನೋಡನೋಡುತ್ತಿದ್ದಂತೆ ಜ್ವಾಲಾಮುಖಿಯಂತಾಗಿ, ಸುತ್ತಮುತ್ತಲಿನ ಜನರನ್ನು ಬೆಚ್ಚಿಬೀಳಿಸಿದೆ.ಶುಕ್ರವಾರ ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಡಂಪಿಂಗ್ ಯಾರ್ಡ್‌ನಲ್ಲಿ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿತು. ದಟ್ಟವಾದ ಕಪ್ಪು ಹೊಗೆ ಮತ್ತು ಆಕಾಶದೆತ್ತರಕ್ಕೆ ಚಿಮ್ಮಿದ ಜ್ವಾಲೆಗಳು ಹಲವು ಕಿಲೋಮೀಟರ್ ದೂರದವರೆಗೂ ಗೋಚರಿಸಿದ್ದವು. ಇದನ್ನು ಕಂಡ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದರು.
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಬೆಂಕಿಯ ತೀವ್ರತೆ ನಿಯಂತ್ರಣಕ್ಕೆ ಸಿಗದಿರುವುದನ್ನು ಮನಗಂಡು, ಅಂಕೋಲಾ ಹಾಗೂ ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್‌ನಿಂದಲೂ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ರಾತ್ರಿಯಿಡೀ ಹರಸಾಹಸ ಪಟ್ಟು ಬೆಂಕಿ ಅಕ್ಕಪಕ್ಕದ ಜನವಸತಿ ಪ್ರದೇಶಗಳಿಗೆ ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಆಯುಕ್ತ ಜಗದೀಶ ಹುಲಗಜ್ಜಿ, ಪ್ಲಾಸ್ಟಿಕ್ ತ್ಯಾಜ್ಯವಾಗಿದ್ದರಿಂದ ಬೆಂಕಿ ನಂದಿಸುವುದು ಸವಾಲಾಗಿತ್ತು. ಸದ್ಯ ಬೆಂಕಿ ನಿಯಂತ್ರಣದಲ್ಲಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಚಳಿ ಕಾಯಿಸಲು ಯಾರಾದರೂ ಹಚ್ಚಿದ ಬೆಂಕಿ ತ್ಯಾಜ್ಯಕ್ಕೆ ತಗುಲಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.ಸಿದ್ದಾಪುರ ಕೊಲೆ ಕೇಸ್: ಇಬ್ಬರು ಪೊಲೀಸರ ಎತ್ತಂಗಡಿಇಡೀ ಸಿದ್ದಾಪುರ ತಾಲೂಕನ್ನೇ ಬೆಚ್ಚಿಬೀಳಿಸಿದ ವಸಂತ ನಾಯ್ಕ ಹತ್ಯೆ ಪ್ರಕರಣದಲ್ಲಿ ಪೊಲೀಸರ ವೈಫಲ್ಯದ ಆರೋಪ ಕೇಳಿಬಂದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ಆರಂಭಿಕ ತನಿಖೆಯಲ್ಲಿ ಸಿದ್ದಾಪುರ ಪೊಲೀಸರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ತನಿಖೆಯ ದೃಷ್ಟಿಯಿಂದ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ಕಾರವಾರದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಎಸ್ಪಿ ದೀಪನ್, ಘಟನೆಯ ದಿನ ಠಾಣೆಯಲ್ಲಿ ಪ್ರಕರಣದ ನಿರ್ವಹಣೆ ಮಾಡುತ್ತಿದ್ದ ಎಎಸ್‌ಐ ಹಾಗೂ ಹೆಡ್ ಕಾನ್ಸ್‌ಟೇಬಲ್ ಅವರನ್ನು ಜಿಲ್ಲೆಯ ಬೇರೆ ಠಾಣೆಗೆ ಅಂದರೆ ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಪ್ರಕರಣದ ಸಂಪೂರ್ಣ ತನಿಖೆಯ ಜವಾಬ್ದಾರಿಯನ್ನು ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರಿಗೆ ವಹಿಸಲಾಗಿದ್ದು, ಅಂದು ಠಾಣೆಯಲ್ಲಿ ಪೊಲೀಸರಿಂದ ನಿಜಕ್ಕೂ ನಿರ್ಲಕ್ಷ್ಯ ಆಗಿದೆಯೇ? ಕರ್ತವ್ಯ ಲೋಪವಾಗಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲಿದ್ದಾರೆ.
ಬಂಧಿತ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ಕೇವಲ ಈ ಕೃತ್ಯಕ್ಕಷ್ಟೇ ಸೀಮಿತವಾಗಿದ್ದಾರೆಯೇ ಅಥವಾ ಬೇರೆ ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿ ವಂಚಿಸಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.ಆರೋಪಿಗಳು ಮಗಳಿಗೆ ಟಾರ್ಚರ್ ನೀಡುತ್ತಿದ್ದರು ಮತ್ತು ಆಕೆ ಅವರೊಂದಿಗೆ ಇರಲು ನಿರಾಕರಿಸಿದ್ದಳು. ಆದರೂ ಬಲವಂತವಾಗಿ ಕರೆದೊಯ್ಯಲು ಬಂದಾಗ ಈ ದುರಂತ ನಡೆದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ತನಿಖೆಯಲ್ಲಿ ಪೊಲೀಸರ ತಪ್ಪು ಸಾಬೀತಾದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.