ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಾರಿಗೆ ಸಂಸ್ಥೆಯ ಬಸ್‌ಗೆ ಏಕಾಏಕಿ ಬೆಂಕಿ ತಗುಲಿದ್ದು, ಚಾಲಕನ ಸಮಯೋಚಿತ ಕ್ರಮದಿಂದ 23 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಾರಿಗೆ ಸಂಸ್ಥೆಯ ಬಸ್‌ಗೆ ಏಕಾಏಕಿ ಬೆಂಕಿ ತಗುಲಿದ್ದು, ಚಾಲಕನ ಸಮಯೋಚಿತ ಕ್ರಮದಿಂದ 23 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕುಮಟಾದಿಂದ ಭಟ್ಕಳಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ರಾಷ್ಟ್ರೀಯ ಹೆದ್ದಾರಿ 66ರಿಂದ ಮುರುಡೇಶ್ವರ ನಾಕೆಯಿಂದ ಬಸ್ ನಿಲ್ದಾಣದತ್ತ ತೆರಳುವ ವೇಳೆ ಜನತಾ ವಿದ್ಯಾಲಯ ಸಮೀಪ ಬಸ್ಸಿನ ಮುಂದಿನ ಎಡ ಚಕ್ರ ಜಾಮ್ ಆಗಿದೆ.

ಇದನ್ನು ಗಮನಿಸಿದ ಚಾಲಕ ಗಣಪತಿ ಚಿದಾನಂದ ಚೌಡಕಿ ಅವರು ತಕ್ಷಣ ಬಸ್ಸನ್ನು ನಿಲ್ಲಿಸಿ ಪರಿಶೀಲನೆ ನಡೆಸುವಾಗ ಎಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಹಾಗೂ ನಿರ್ವಾಹಕ ಶ್ರೀಪಾದ ಹನುಮಂತ ಮಡಿವಾಳ ಅವರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಕ್ಷಣ ಸುರಕ್ಷಿತವಾಗಿ ಕೆಳಗಿಳಿಸಿದರು.

ನಂತರ ಸ್ಥಳೀಯ, ಆಟೋ ಚಾಲಕ ಮಂಜುನಾಥ ಮೊಗೇರ, ಬಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಹಕಾರದಿಂದ ಬೆಂಕಿ ನಂದಿಸಲಾಯಿತು. ಭಟ್ಕಳ ಡಿಪೋದಿಂದ ಮೆಕಾನಿಕ್‌ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಪ್ರಾಥಮಿಕ ಮಾಹಿತಿಯಂತೆ ಚಕ್ರದ ಲೈನರ್ ಜಾಮ್ ಆಗಿರುವುದೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸುಮಾರು ಐದು ವರ್ಷ ಹಳೆಯದಾದ ಈ ಬಸ್‌ನಲ್ಲಿ ಸಂಭವಿಸಿದ ಘಟನೆಯಿಂದ ಯಾರಿಗೂ ಏನೂ ಆಗಿಲ್ಲ.

17ಬಿಕೆಲ್2: ಮುರುಡೇಶ್ವರದಲ್ಲಿ ಬಸ್ಸಿನ ಒಳಭಾಗಕ್ಕೆ ಬೆಂಕಿ ತಗುಲಿರುವುದು.