ಸಾರಾಂಶ
ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಅಮೃತ ಮಣ್ಣಿನಿಂದ ಮುಚ್ಚಳಾಗಿದ್ದ ಗರ್ಭಗುಡಿಯನ್ನು ತೆರೆದು ಹೋಮ ಹವನಾದಿಗಳನ್ನು ನೆರವೇರಿಸಲಾಯಿತು. ಗುರುವಾರ ರಾತ್ರಿ ಶ್ರೀ ಚೌಡೇಶ್ವರಿ ಅಮ್ಮನವರ ಮೂಲ ವಿಗ್ರಹಕ್ಕೆ ಅಭಿಷೇಕ ಮತ್ತು ಪುಷ್ಪಾಲಂಕಾರ ಸೇವೆ ಬಳಿಕ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ಪಾರ್ವತಿ ದೇವಿಯ ಅಂಶವಾಗಿರುವ, ತಾಲೂಕಿನ ಹೆಮ್ಮನಹಳ್ಳಿ ಶಕ್ತಿ ದೇವತೆ ಶ್ರೀಚೌಡೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮುಂಜಾನೆ ನಡೆದ ಅಗ್ನಿಕೊಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಅರ್ಚಕ ಜೀವನ್ ಶ್ರೀಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಉಳ್ಳ ಪಟವನ್ನು ಹೊತ್ತು ಮುಂಜಾನೆ ನಾಲ್ಕು ಮೂವತ್ತರ ಸುಮಾರಿಗೆ ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಅಗ್ನಿಕುಂಡ ಪ್ರವೇಶ ಮಾಡಿದರು.
ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಅಮೃತ ಮಣ್ಣಿನಿಂದ ಮುಚ್ಚಳಾಗಿದ್ದ ಗರ್ಭಗುಡಿಯನ್ನು ತೆರೆದು ಹೋಮ ಹವನಾದಿಗಳನ್ನು ನೆರವೇರಿಸಲಾಯಿತು. ಗುರುವಾರ ರಾತ್ರಿ ಶ್ರೀ ಚೌಡೇಶ್ವರಿ ಅಮ್ಮನವರ ಮೂಲ ವಿಗ್ರಹಕ್ಕೆ ಅಭಿಷೇಕ ಮತ್ತು ಪುಷ್ಪಾಲಂಕಾರ ಸೇವೆ ಬಳಿಕ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀ ಚೌಡೇಶ್ವರಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇಗುಲದವರೆಗೆ ರಥೋತ್ಸವ ನೆರವೇರಿತು. ನೆರೆದಿದ್ದ ಅಸಂಖ್ಯಾತ ಭಕ್ತಾದಿಗಳು ಹಣ್ಣುದವನ ಎಸೆದು ರಥ ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು.
ಶುಕ್ರವಾರ ರಾತ್ರಿ 10 ಗಂಟೆವರೆಗೆ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಗರ್ಭಗುಡಿಯಲ್ಲಿ ನಂದಾದೀಪ ಬೆಳಗಿಸುವ ಮೂಲಕ ಅಮೃತ ಮಣ್ಣಿನಿಂದ ಪ್ರವೇಶ ದ್ವಾರವನ್ನು ಮುಚ್ಚುವುದರೊಂದಿಗೆ ವರ್ಷದಲ್ಲಿ ಕೇವಲ 36 ಗಂಟೆಗಳ ದೇವರ ದರ್ಶನಕ್ಕೆ ತೆರೆ ಎಳೆಯಲಾಯಿತು.ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಶಾಸಕ ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಾದಾಮಿ ಹಾಲು ವಿತರಣೆ ಮಾಡಲಾಯಿತು. ಸೋಮನಹಳ್ಳಿ ತಿಮ್ಮ ದಾಸ್ ಗ್ರೂಪ್ ಮಾಲೀಕ ಸಿ.ಟಿ. ಶಂಕರ್ ಹಾಗೂ ಹೆಮ್ಮನಹಳ್ಳಿ ನಂದಿ ಯುವಕರ ಬಳಗದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಶ್ರೀ ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎಚ್. ಕೆ. ಕೃಷ್ಣ, ಗೌರವಾಧ್ಯಕ್ಷ ದೊಡ್ಡ ಕೆಂಪೇಗೌಡ, ಉಪಾಧ್ಯಕ್ಷ ಎಚ್.ಕೆ .ಜಯಶಂಕರ್, ಖಜಾಂಚಿ ರಾಜಕುಮಾರ್, ಕಾರ್ಯದರ್ಶಿ ಜಯಶಂಕರ್, ನಿರ್ದೇಶಕರಾದ ಉಮೇಶ್, ಕೆಂಪಟ್ಟಿ ಗೌಡ, ನಾಗೇಶ, ಕೆ. ಟಿ.ಶಿವರಾಮು, ರಮೇಶ್, ಶ್ರೀನಿವಾಸ್, ಅಶ್ವತ್, ಮಧುಸೂದನ್ , ಜಯಲಕ್ಷ್ಮಮ್ಮ, ವೆಂಕಟೇಶ್ ಹಾಗೂ ಮಮತಾ ಅವರುಗಳ ಉಸ್ತುವಾರಿಯಲ್ಲಿ ಜಾತ್ರಾ ಮಹೋತ್ಸವ ನೆರವೇರಿತು.