ಮಹದೇಶ್ವರ ಕಾವೇರಿ ವನ್ಯಧಾಮದಲ್ಲಿ ಬೆಂಕಿ!

| Published : Feb 26 2025, 01:01 AM IST

ಸಾರಾಂಶ

ಹನೂರು ತಾಲೂಕಿನ ರಾಮಪುರ ವಲಯದ ಮಕರಿಕಲ್ಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನೂರಾರು ಎಕರೆ ಕಾಡು ಬೆಂಕಿಗಾಹುತಿಯಾಗಿದೆ.

ಕಳೆದ ಕೆಲವು ದಿನಗಳಿಂದ ಒಂದಲ್ಲ ಒಂದು ಕಡೆ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದು, ಕಾವೇರಿ ವನ್ಯಧಾಮದ ಕೊತ್ತನೂರು, ಕೌದಳ್ಳಿ ವಲಯಗಳಲ್ಲಿ ಹಾಗೂ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯ, ಹೂಗ್ಯಂ, ಪಿಜಿ ಪಾಳ್ಯ ವಲಯಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹನೂರು ತಾಲೂಕಿನ ರಾಮಪುರ ಸಮೀಪದ ಮಕರಿ ಕಲ್ಲು ಅರಣ್ಯ ಪ್ರದೇಶದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಪರಿಣಾಮ 4 ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ರಾಮಪುರ ವಲಯದ ಮಕರಿಕಲ್ಲು ಅರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಗಿಡ ಮರ ಸುಟ್ಟು ಭಸ್ಮವಾಗಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ತಡರಾತ್ರಿವರೆಗೂ ಕಾರ್ಯಾಚರಣೆ ಕೈಗೊಂಡು ವಲಯ ಅರಣ್ಯ ಅಧಿಕಾರಿ ರಾಜಶೇಖರ್ ನೇತೃತ್ವ ತಂಡ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ಕಿಡಿಗೇಡಿಗಳ ಕೃತ್ಯ ಶಂಕೆ:

ಹನೂರು ತಾಲೂಕಿನಲ್ಲಿ ವಿವಿಧ ವಲಯ ಹಾಗೂ ಮಲೆಮಾದೇಶ್ವರ ವನ್ಯಧಾಮ ಸೇರಿದಂತೆ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶಗಳಲ್ಲಿ ಇತ್ತೀಚೆಗೆ ಕಳೆದ ಒಂದು ವಾರದಿಂದ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಸುಟ್ಟು ಕರಕಲಾಗಿರುವ ಬಗ್ಗೆ ವರದಿಯಾಗಿದ್ದು, ಕಿಡಿಗೇಡಿಗಳ ಕೃತ್ಯ ಪತ್ತೆ ಹಚ್ಚಲು ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಂಚಿನ ಬೀಟ್‌ಗಳ ಬಳಿ ಡ್ರೋಣ್ ಕ್ಯಾಮೆರಾ ಬಳಸುವ ಮೂಲಕ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.