ಜೆಸ್ಕಾಂ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ

| Published : May 27 2024, 01:00 AM IST

ಸಾರಾಂಶ

ಸ್ಟೋರ್‌ ರೂಂನಲ್ಲಿ ಸುಮಾರು 50 ವಿದ್ಯುತ್‌ ಪರಿವರ್ತಕಗಳು ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರುಪಾಯಿ ಮೌಲ್ಯದ ಸಾಮಗ್ರಿ ಹಾನಿಯಾಗಿದೆ ಎಂದು ಜೆಸ್ಕಾಂ ಅಂದಾಜಿಸಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಜೆಸ್ಕಾಂ ಕಚೇರಿಯ ವಿದ್ಯುತ್‌ ಪರಿವರ್ತಕ (ಟ್ರಾನ್ಸಫಾರ್ಮರ್) ದುರುಸ್ತಿ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ ಅಗ್ನಿ ಅವಘಡದಿಂದ ಅಪಾರ ಹಾನಿಯಾದ ಘಟನೆ ಜರುಗಿದೆ.

ಸ್ಟೋರ್‌ ರೂಂನಲ್ಲಿ ಸುಮಾರು 50 ವಿದ್ಯುತ್‌ ಪರಿವರ್ತಕಗಳು ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರುಪಾಯಿ ಮೌಲ್ಯದ ಸಾಮಗ್ರಿ ಹಾನಿಯಾಗಿದೆ ಎಂದು ಜೆಸ್ಕಾಂ ಅಂದಾಜಿಸಿದೆ.

ಪರಿವರ್ತಕಗಳಲ್ಲಿ ಆಯಿಲ್‌ ತುಂಬಿದ್ದರಿಂದ ಬೆಂಕಿ ಬಾನೆತ್ತರಕ್ಕೆ ಕಂಡು ಬಂದಿತ್ತು. ಘಟನೆಯ ಸುದ್ದಿ ತಿಳಿಯುತ್ತಲೇೇ ಅಗ್ನಿ ಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಹಾಸಪಟ್ಟರು. ಬೆಂಕಿ ಅವಘಡದಲ್ಲಿ ಇಲಾಖೆಯ ಹಳೆ ವಾಹನಗಳು ಕೂಡ ಸುಟ್ಟಿವೆ. ಮೂರು ಅಗ್ನಿ ಶಾಮಕ ವಾಹನಗಳ ಸಿಬ್ಬಂದಿ ಸರಿಸುಮಾರು ಒಂದು ಗಂಟೆಯಲ್ಲಿ ಬೆಂಕಿ ಹತೋಟಿಗೆ ತಂದರು.5 ಟ್ರಾನ್ಸಫರ್ಮರ್‌ ಭಸ್ಮ

ಸುಮಾರು 50 ಟ್ರಾನ್ಸಫರ್ಮರ್‌ಗಳು ಹಾಗೂ ಜೆಸ್ಕಾಂಗೆ ಸೇರಿದ ವಾಹನ ಶಾರ್ಟ್‌ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಪ್ರತ್ಯಕ್ಷದರ್ಶಿಗಳ ಅಂಬೋಣವಾಗಿದ್ದರೂ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ರಮೇಶ ಪಾಟೀಲ್‌ ಕನ್ನಡಪ್ರಭಕ್ಕೆ ಮಾತನಾಡಿ 5 ಟ್ರಾನ್ಸಫರ್ಮರ್‌ಗಳು ಸುಟ್ಟಿದ್ದು ವಾನಗಳಿಗೆ ಬೆಂಕಿಗೆ ಆಹುತಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಡೀ ಜಿಲ್ಲೆಗೆ ವಿದ್ಯುತ್‌ ಪೂರೈಸುವ ಜೆಸ್ಕಾಂ ಕೇಂದ್ರ ಕಚೇರಿಯಲ್ಲಿಯೇ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿರುವದು ಹುಬ್ಬೇರಿಸುವಂಥದ್ದು. ವಿದ್ಯುತ್‌ ಅವಘಡ ಸಂಭವಿಸದಂತೆ ಸಲಹೆಗಳನ್ನು ನೀಡಿ ಸಾರ್ವಜನಿಕರಿಗೆ ಎಚ್ಚರಿಸುವ ಇಲಾಖೆಯ ಕಚೇರಿಯಲ್ಲಿಯೇ ಈ ಅವಘಡ ನಿರ್ಲಕ್ಷಕ್ಕೆ ಉದಾಹರಣೆ ಆಗಿದೆ ಎಂದೆನ್ನಬಹುದು.

ಮಳೆಗಾಲ ಆರಂಭವಾಗುತ್ತಿರುವ ಈ ದಿನಗಳಲ್ಲಿ ಹೊಲಗದ್ದೆಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಟ್ರಾನ್ಸಫರ್ಮರ್‌ಗಳು ಕೆಟ್ಟು ಹೋಗುವ ಸಾಧ್ಯತೆ ಹೆಚ್ಚಿವೆ ಅಂಥದರಲ್ಲಿ ಹತ್ತಾರು ಟ್ರಾನ್ಸಫರ್ಮರ್‌ಗಳು ಸುಟ್ಟು ಕರಕಲಾಗಿರುವದು ಮುಂದಿನ ಕೆಲ ದಿನಗಳ ವರೆಗೆ ಟ್ರಾನ್ಸಫರ್ಮರ್‌ ತಕ್ಷಣಕ್ಕೆ ಬದಲಾವಣೆ ಕಷ್ಟಕರ ಎಂದು ಹೇಳಬಹುದು.

ಅದೇನಿದ್ದರೂ ಸ್ಟೋರ್‌ ರೂಮ್‌ನಲ್ಲಿ ವಿದ್ಯುತ್‌ ಸಂಪರ್ಕದಿಂದ ಬೆಂಕಿ ತಗುಲಿದೆ ಎಂದೆನ್ನಲಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.