ಪೆಂಟ್ ಅಂಗಡಿಯಲ್ಲಿ ಅಗ್ನಿ ಅವಘಡ: ₹40 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

| Published : Jan 28 2024, 01:18 AM IST

ಪೆಂಟ್ ಅಂಗಡಿಯಲ್ಲಿ ಅಗ್ನಿ ಅವಘಡ: ₹40 ಲಕ್ಷ ಮೌಲ್ಯದ ವಸ್ತುಗಳು ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಪೆಂಟ್ ಅಂಗಡಿಯಲ್ಲಿ ಅಗ್ನಿ ಅವಘಡ: ₹40 ಲಕ್ಷ ಮೌಲ್ಯದ ವಸ್ತುಗಳು ಭಸ್ಮ, ಶಾರ್ಟ್‌ ಸರ್ಕೀಟ್‌ನಿಂದ ಕಿಡಿ ಹಾರಿ ಅವಘಡ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಣ್ಣ ಹಾಗೂ ಸಿಮೆಂಟ್‌ ಮಾರಾಟ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸುಮಾರು ₹40 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಳೆಪೇಟೆ ಮುಖ್ಯರಸ್ತೆಯಲ್ಲಿರುವ ಕೃಷ್ಣಪ್ಪಗೌಡ ವಿಜಯಕುಮಾರ್ ಎಂಬುವರಿಗೆ ಸೇರಿದ ಲಕ್ಷ್ಮಿ ನರಸಿಂಹ ಟ್ರೇಡರ್ಸ್ ಆ್ಯಂಡ್‌ ಹಾರ್ಡ್‌ವೇರ್ ಶಾಪ್‌ನಲ್ಲಿ ಈ ದುರಂತ ಸಂಭವಿಸಿದ್ದು, ಎರಡು ಗಂಟೆ ಸತತ ಕಾರ್ಯಾಚರಣೆ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಣ್ಣ ಹಾಗೂ ಸಿಮೆಂಟ್ ಮಾರಾಟಗಾರ ಕೃಷ್ಣಪ್ಪ ಅವರು, ಹಲವು ವರ್ಷಗಳಿಂದ ಬಳೇಪೇಟೆ ಮುಖ್ಯರಸ್ತೆಯಲ್ಲಿ ಅಂಗಡಿ ಇಟ್ಟಿದ್ದಾರೆ. ಮೂರು ಅಂತಸ್ತಿನ ಅಂಗಡಿ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ, ಕೆಳ ಮಹಡಿಯಲ್ಲಿ ಬಣ್ಣ ಹಾಗೂ ಸಿಮೆಂಟ್ ಸಂಗ್ರಹಿಸಿದ್ದರು.

ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಶಾರ್ಟ್ ಸರ್ಕೀಟ್‌ನಿಂದ ಉಂಟಾದ ಬೆಂಕಿ ಕಿಡಿ ಬಣ್ಣದ ಡಬ್ಬಗಳಿಗೆ ತಾಕಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಟ್ಟಡಕ್ಕೆ ವ್ಯಾಪಿಸಿದೆ. ದಟ್ಟ ಹೊಗೆ ಕಂಡು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ (112)ಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದರು. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ.