ಸಾರಾಂಶ
ನರಸಿಂಹರಾಜಪುರ, ಯಾವುದೇ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿರುವುದು ಮನವರಿಕೆ ಆದ ಕೂಡಲೇ ತಕ್ಷಣ ಕೊಠಡಿ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು ಎಂದು ಅಗ್ನಿಶಾಮಕ ದಳದ ಪ್ರಭಾರ ಅಗ್ನಿ ಶಾಮಕ ಠಾಣಾಧಿಕಾರಿ ದೇವೇಂದ್ರ ನಾಯಕ್ ಸಲಹೆ ನೀಡಿದರು.
ಗಾಂಧಿ ಗ್ರಾಮ, ಸೂಸಲವಾನಿಯಲ್ಲಿ ಅಗ್ನಿಶಾಮಕ ದಳದಿಂದ ಸಿಲಿಂಡರ್ ಸೋರಿಕೆ ಬಗ್ಗೆ ಮಾಹಿತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಯಾವುದೇ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿರುವುದು ಮನವರಿಕೆ ಆದ ಕೂಡಲೇ ತಕ್ಷಣ ಕೊಠಡಿ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು ಎಂದು ಅಗ್ನಿಶಾಮಕ ದಳದ ಪ್ರಭಾರ ಅಗ್ನಿ ಶಾಮಕ ಠಾಣಾಧಿಕಾರಿ ದೇವೇಂದ್ರ ನಾಯಕ್ ಸಲಹೆ ನೀಡಿದರು.
ಸೋಮವಾರ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ ಗಾಂಧಿ ಗ್ರಾಮ ಹಾಗೂ ಸೂಸಲವಾನಿಯಲ್ಲಿ ಗ್ರಾಮಸ್ಥರಿಗೆ ಗ್ಯಾಸ್ ಸಿಲಿಂಡರ್ ಸೋರಿಕೆ ಹಾಗೂ ಬೆಂಕಿ ಹೊತ್ತಿಕೊಂಡಾಗ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. 1944 ರ ಸಮಯದಲ್ಲಿ 2 ನೇ ಮಹಾ ಯುದ್ಧವಾದಾಗ ಸ್ರೈಕಿನ್ ಎಂಬ ಯುದ್ಧನೌಕೆಯಲ್ಲಿದ್ದ ಸ್ಪೋಟಕ ಸಾಮಾಗ್ರಿಗಳಿಗೆ ಬೆಂಕಿ ಹೊತ್ತಿಗೊಂಡಾಗ ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ಅಗ್ನಿಶಾಮಕ ಇಲಾಖೆ 70 ಅಧಿಕಾರಿಗಳು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಪ್ರತಿ ವರ್ಷ ಏ.14 ರಿಂದ 20 ವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ, ದಿನಾಚರಣೆ ಆಚರಿಸಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆ ಮತ್ತು ನಿಯಂತ್ರಣದ ಬಗ್ಗೆ ಅರಿವು ಮಾಡಿಸುತ್ತಿದ್ದೇವೆ ಎಂದರು.ಗ್ಯಾಸ್ ಸಿಲಿಂಡರ್ ಲೀಕೇಜ್ ಆಗುತ್ತಿದ್ದರೆ ತಕ್ಷಣ ಕಿಟಕಿ ಬಾಗಿಲು ತೆಗೆಯಬೇಕು. ಗಾಳಿ ಬೆಳಕು ಸರಾಗವಾಗಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆ ಕೊಠಡಿ ವಿದ್ಯುತ್ ಸ್ವಿಚ್ ಹಾಕಲು ಅಥವಾ ಸ್ವಿಚ್ ಆಫ್ ಮಾಡಲು ಹೋಗಬಾರದು. ತಕ್ಷಣ ಸಿಲಿಂಡರ್ ಮನೆಯಿಂದ ಹೊರಗೆ ತಂದು ಇಡಬೇಕು ಎಂದು ಸಲಹೆ ನೀಡಿದರು.
ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡರೆ ತಕ್ಷಣ ಬಟ್ಟೆಯನ್ನು ಒದ್ದೆ ಮಾಡಿ ಸಿಲಂಡರ್ ಮೇಲೆ ಹಾಕಿ ಸುತ್ತಬೇಕು. ಬೆಂಕಿ ಆರಿದ ನಂತರ ರೆಗ್ಯುಲೇಟರ್ ಆಫ್ ಮಾಡಬೇಕು. ಬೆಂಕಿಯಿಂದ ಹತ್ತಿರ ಹೋಗಲು ಸಾಧ್ಯವಾಗದಿದ್ದರೆ ದೂರದಿಂದಲೇ ಪೈಪ್ ಗಳಿಂದ ನೀರನ್ನು ಹಾಕಿ ಬೆಂಕಿ ನಂದಿಸಬೇಕು. ಪ್ರತಿಯೊಬ್ಬರೂ 2 ವರ್ಷಕ್ಕೊಮ್ಮೆ ಗ್ಯಾಸ್ ಟ್ಯೂಬ್ ಬದಲಾಯಿಸಿ ಕೊಳ್ಳಬೇಕು. ಐಎಸ್ಐ ಮಾರ್ಕಿನ ಟ್ಯೂಬ್ ಹಾಕಿಸಬೇಕು. ಅಡುಗೆ ಮನೆಯಲ್ಲಿ ಗ್ಯಾಸ್ ಒಲೆ ಮೇಲ್ಬಾಗದಲ್ಲಿ ಇಡಬೇಕು. ಪ್ರತಿ ದಿನ ಗ್ಯಾಸ್ ಉಪಯೋಗಿಸಿದ ನಂತರ ರೆಗ್ಯೂಲೇಟರ್ ಆಫ್‌ಪ್ ಮಾಡಬೇಕು. ಖಾಲಿ ಸಿಲಂಡರ್ ಗಳನ್ನು ನೇರವಾಗಿ ಇಡಬೇಕು. ತಲೆಕೆಳಗಾಗಿ ಇಡಬಾರದು ಎಂದು ಸಲಹೆ ನೀಡಿದರು.ಪಟ್ಟಣದ ಅಗ್ನಿಶಾಮಕ ದಳದ ಕಚೇರಿಯಲ್ಲಿ ಹುತಾತ್ಮ ಸಿಬ್ಬಂದಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಟ್ಟಣದ ವಿವಿಧ ಅಂಗಡಿ ಹಾಗೂ ನಾಗರಿಕರಿಗೆ ಕರಪತ್ರ ಹಂಚಲಾಯಿತು.
ನಂತರ ಸೂಸಲವಾನಿಯಲ್ಲಿ ಧ.ಗ್ರಾ.ಯೋಜನೆ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಗ್ಯಾಸ್ ಸಿಲಿಂಡರ್ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖ ಅಗ್ನಿಶಾಮಕ ಅಧಿಕಾರಿ ಡಿ.ಕೆ. ಸಂತೋಷಕುಮಾರ್, ಸಿಬ್ಬಂದಿ ಪಿ.ರಮೇಶ್, ಬಸವರಾಜ ಮೇಟಿ, ಡಿ.ಆರ್. ನವೀನ್ ನಾಯ್ಕ್, ಶಿವಾನಂದ ವಿ ಶಿಂಧೆ ಇದ್ದರು.