ಶಾಲೆಯಲ್ಲಿ ಸಿಸಿಎ ಚಟುವಟಿಕೆಗಳ ಭಾಗವಾಗಿ ಮಕ್ಕಳಿಗೆ ಬೆಂಕಿ ರಹಿತ ಅಡುಗೆ ಎಂಬ ಪರಿಕಲ್ಪನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಾವು ಊಹಿಸದಷ್ಟು ಬಗೆಬಗೆಯ ವೈವಿಧ್ಯಮಯ ತಿನಿಸುಗಳನ್ನು ಮಕ್ಕಳು ಸಿದ್ಧಪಡಿಸಿ ತಂದಿರುವುದು ಬಹಳ ಸಂತೋಷ ತಂದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಕಿ ರಹಿತ ಅಡುಗೆ ಮೂಲಕ ವೈವಿಧ್ಯಮಯ ತಿಂಡಿ-ತಿನಿಸುಗಳನ್ನು ತಯಾರಿಸುವ ಮೂಲಕ ಪುಟ್ಟ ಮಕ್ಕಳು ವಿಶೇಷ ಅನುಭವವನ್ನು ಪಡೆದು ಸಂತಸಪಟ್ಟರಲ್ಲದೆ ಎಲ್ಲರ ಗಮನಸೆಳೆದರು.ಕುಕುಂಬರ್ ಬೋಟ್, ಕುಕುಂಬರ್ ಕಿಮ್ಚಿ, ಪೆರಿ ಪೆರಿ ಸ್ಯಾಂಡ್ವಿಚ್, ಚುರುಮುರಿ, ತರಕಾರಿ ಮತ್ತು ಹಣ್ಣುಗಳ ಸಲಾಡ್ ಸೇರಿದಂತೆ ಹಲವಾರು ಮಾದರಿಯ ತಿಂಡಿ-ತಿನಿಸುಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟು ಎಲ್ಲರನ್ನೂ ಆಕರ್ಷಿಸಿದರು.
ನಗರದ ಜ್ಞಾನಸಾಗರ ಕ್ಯಾಂಪಸ್ನಲ್ಲಿರುವ ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಯಿಂದ ಪ್ರೀ-ಕೆಜಿಯಿಂದ ೯ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗಾಗಿ ಬೆಂಕಿ ರಹಿತ ಅಡುಗೆ (ಕುಕಿಂಗ್ ವಿಥೌಟ್ ಫೈರ್) ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಎಸ್ಬಿಇಟಿ ಅಧ್ಯಕ್ಷ ಬಿ.ಶಿವಲಿಂಗಯ್ಯ ಉದ್ಘಾಟಿಸಿದರು.ಗೀತಾಂಜಲಿ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಸರೋಜಾ ಮಾತನಾಡಿ, ಶಾಲೆಯಲ್ಲಿ ಸಿಸಿಎ ಚಟುವಟಿಕೆಗಳ ಭಾಗವಾಗಿ ಮಕ್ಕಳಿಗೆ ಬೆಂಕಿ ರಹಿತ ಅಡುಗೆ ಎಂಬ ಪರಿಕಲ್ಪನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಾವು ಊಹಿಸದಷ್ಟು ಬಗೆಬಗೆಯ ವೈವಿಧ್ಯಮಯ ತಿನಿಸುಗಳನ್ನು ಮಕ್ಕಳು ಸಿದ್ಧಪಡಿಸಿ ತಂದಿರುವುದು ಬಹಳ ಸಂತೋಷ ತಂದಿದೆ. ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ ಎಲ್ಲ ಪೋಷಕರಿಗೆ ಧನ್ಯವಾದಗಳು ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಎನ್.ತನ್ವಿತಾ ಮಾತನಾಡಿ, ಇದು ನನ್ನ ಜೀವನದ ಅತ್ಯಂತ ಸುಂದರ ಕ್ಷಣ. ನಾನು ಕುಕುಂಬರ್ ಬೋಟ್ ಸಿದ್ಧಪಡಿಸಿದ್ದೇನೆ. ಇದೆಲ್ಲವನ್ನೂ ನೋಡುತ್ತಿದ್ದರೆ ಇದೊಂದು ವಿಶೇಷ ಅನುಭವ ಎನಿಸುತ್ತಿದೆ ಎಂದು ಸಂತಸ ಹಂಚಿಕೊಂಡರು.ಏಳನೇ ತರಗತಿ ವಿದ್ಯಾರ್ಥಿನಿ ಸಾನ್ಯಾ ಮಾತನಾಡಿ, ನನ್ನ ಸ್ನೇಹಿತರೊಂದಿಗೆ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ಖುಷಿ ತಂದಿದೆ. ನಾನು ಕುಕುಂಬರ್ ಕಿಮ್ಚಿ ಹಾಗೂ ಪೆರಿ-ಪೆರಿ ಸ್ಯಾಂಡ್ವಿಚ್ ತಯಾರಿಸಿದ್ದೇನೆ ಎಂದರು.
ಮತ್ತೋರ್ವ ಏಳನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಮಾತನಾಡಿ, ಬೆಂಕಿ ರಹಿತ ಅಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಾವು ಮಾಡಿದ ಅಡುಗೆಯನ್ನು ನೋಡಿ ಪ್ರಾಂಶುಪಾಲರು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ವಿ.ಡಿ.ರಾಜಣ್ಣ, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.