ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಗುಂಡ್ಲುಪೇಟೆ ಹಳೇ ಬಸ್ ನಿಲ್ದಾಣದ ಬಳಿ ಬಯಲು ರಂಗಮಂದಿರ ಆವರಣದಲ್ಲಿ ಪಟಾಕಿ ಅಂಗಡಿ ಇಡಲು ಸಾರ್ವಜನಿಕರು ಹಾಗೂ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಗುಂಡ್ಲುಪೇಟೆ ಹಳೇ ಬಸ್ ನಿಲ್ದಾಣದ ಬಳಿ ಬಯಲು ರಂಗಮಂದಿರ ಆವರಣದಲ್ಲಿ ಪಟಾಕಿ ಅಂಗಡಿ ಇಡಲು ಸಾರ್ವಜನಿಕರು ಹಾಗೂ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ಹಿಂದಿನ ವರ್ಷಗಳಿಂದಲೂ ಇದೇ ಸ್ಥಳದಲ್ಲಿ ಪಟಾಕಿ ಅಂಗಡಿಗಳು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಇದೇ ಸ್ಥಳದಲ್ಲಿ ಅಂಗಡಿ ಇಡಲು ಪುರಸಭೆ ಸೇರಿದಂತೆ ಇತರ ಇಲಾಖೆಗಳು ಸಮ್ಮತಿ ನೀಡಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಆದರೆ ಹಳೇ ಬಸ್ ನಿಲ್ದಾಣದಲ್ಲಿ ದಿನವಿಡೀ ಜನಜಂಗುಳಿ ಇರುತ್ತದೆ. ಬಯಲು ರಂಗಮಂದಿರದ ಸುತ್ತ ವಾಣಿಜ್ಯ ಮಳಿಗೆಗಳಿವೆ. ಬಾರ್ ಇದೆ, ಜತೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಫಾಸ್ಟ್ ಫುಡ್, ಪಾನಿಪುರಿ ಅಂಗಡಿಗಳಿಗಳಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಕುದಿಯುವ ಎಣ್ಣೆ ಬಳಸಲಾಗುತ್ತಿರುವ ಸಮೀಪ ಪಟಾಕಿ ಅಂಗಡಿಗೆ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಪಟಾಕಿ ಅಂಗಡಿಯಿಂದ ಸಣ್ಣ ಕಿಡಿ ಹಾರಿದರೂ ದೊಡ್ಡ ಅನಾಹುತವಾಗುವ ಸಾಧ್ಯತೆ ಇದೆ.ಮಕ್ಕಳು,ವೃದ್ದರು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಅಪಾಯವಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಪಟಾಕಿ ಅಂಗಡಿಗಳು ಬೆಂಕಿ ಹತ್ತುವ ವಸ್ತುಗಳಿಂದ ದೂರ, ಜನಜಂಗುಳಿ ಇಲ್ಲದ ತೆರೆದ ಮೈದಾನದಲ್ಲಿ ಇಡಬೇಕು ಎಂದು ನಿಯಮವಿದ್ದರೂ, ಜನಜಂಗುಳಿ ಇರುವ ಬಸ್ ನಿಲ್ದಾಣದಲ್ಲೇ ಅಂಗಡಿ ಇಡುವುದು ಸರಿಯಲ್ಲ ಎಂದು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆಯು ಆಗ್ರಹಿಸಿದೆ.ಪಟ್ಟಣದಲ್ಲಿ ಪಟಾಕಿ ಅಂಗಡಿ ಇರಬಾರದು ಎಂಬುದು ಸಂಘಟನೆಯ ಉದ್ದೇಶವಲ್ಲ,ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂಬುದು ನಮ್ಮ ಆಶಯ ಎಂದು ವೇದಿಕೆಯ ಅಧ್ಯಕ್ಷ ಸ್ವಾಮಿ ನಾಯಕ್ ತಿಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ?:ಗುಂಡ್ಲುಪೇಟೆ ಪಟ್ಟಣದ ಹೃದಯ ಭಾಗ ಎಂದು ಹೇಳಲಾದ ನೆಹರು ಸರ್ಕಲ್ ಬಳಿಯ ಪುರಸಭೆ ಬಯಲು ರಂಗ ಮಂದಿರದಲ್ಲಿ ಪಟಾಕಿ ಅಂಗಡಿ ಇಡಲು ಅನುಮತಿ ನೀಡಿರುವುದು ಬಗ್ಗೆ ಸಾರ್ವಜನಿಕರಲ್ಲಿ ಅಪಸ್ವರ ಎದ್ದಿರುವ ಕಾರಣ ಪಟಾಕಿ ಅಂಗಡಿ ಬಯಲು ರಂಗ ಮಂದಿರದ ಅಸುರಕ್ಷಿತ ಸ್ಥಳದಲ್ಲೇ ಇಡಬೇಕು ಎಂದು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಹಿಂದಿನಿಂದಲೇ ಅದೇ ಸ್ಥಳದಲ್ಲಿ ಪಟಾಕಿ ಅಂಗಡಿ ಇಡುತ್ತಿದ್ದರು ಎಂಬ ಕಾರಣಕ್ಕೆ ಸರ್ಕಾರದ ನಿಯಮ ಉಲ್ಲಂಘಿಸಿ ಅನುಮತಿ ನೀಡುವುದು ಸರೀನಾ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಅಧಿಕಾರಿಗಳನ್ನು ಕೇಳಿದ್ದಾರೆ.ಪಟಾಕಿ ಹಚ್ಚಬೇಕು ಎಂಬ ಮನಸ್ಸಿರುವ ನಾಗರೀಕರು ಮೈಸೂರಿಗೆ ಹೋಗಿ ಪಟಾಕಿ ಖರೀದಿಸುತ್ತಾರೆ.ಪಟ್ಟಣದ ಹೊರ ವಲಯದಲ್ಲಿ ಪಟಾಕಿ ಅಂಗಡಿ ಇಟ್ಟರೆ ಪಟ್ಟಣದ ನಾಗರೀಕರು ಖರೀದಿಸುತ್ತಾರೆ ಎಂದು ಹೆಸರೇಳಲಿಚ್ಚಿಸಿದ ನಾಗರಿಕರೊಬ್ಬರು ಹೇಳಿದ್ದಾರೆ.
ಪಟ್ಟಣದ ನೆಹರು ಪಾರ್ಕ್ ಬಳಿಯ ಪುರಸಭೆ ಬಯಲು ರಂಗ ಮಂದಿರದಲ್ಲಿ ಪಟಾಕಿ ಅಂಗಡಿ ಇಡಲು ಅಭಿಪ್ರಾಯ ಕೊಟ್ಟಿದೆ.ಹಿಂದಿನಿಂದಲೂ ಅದೇ ಸ್ಥಳದಲ್ಲಿ ಪಟಾಕಿ ಇಟ್ಟಿದ್ದೇವು ಎಂದು ಹೇಳಿರುವ ಕಾರಣ ಪುರಸಭೆ ಅಭಿಪ್ರಾಯ ಕೊಟ್ಟಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಹೇಳಿದ್ದಾರೆ.ಪಟ್ಟಣದ ಹೃದಯ ಭಾಗದಲ್ಲಿ ಪಟಾಕಿ ಅಂಗಡಿಗಳು ಬೇಡ,ಪಟ್ಟಣದ ಹೊರ ವಲಯದಲ್ಲಿ ಇಡಲಿ ಎಂದು ಪುರಸಭೆಗೆ ಮನವಿ ಕೊಟ್ಟಿದ್ದೇವು.ಆದರೂ ಪಟಾಕಿ ಅಂಗಡಿ ತಲೆ ಎತ್ತುತ್ತಿವೆ. ಈ ಬಗ್ಗೆ ಡಿಸಿ, ಎಸಿಗೆ ದೂರು ನೀಡಲಾಗಿದೆ ಎಂದು ಗುಂಡ್ಲುಪೇಟೆ ನಿವಾಸಿ ಸ್ವಾಮಿ ನಾಯಕ್ ತಿಳಿಸಿದ್ದಾರೆ.