ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮೊದಲ ದಿನ 29 ನಾಮಪತ್ರ ಸಲ್ಲಿಕೆ

| Published : Mar 29 2024, 02:00 AM IST / Updated: Mar 29 2024, 02:57 PM IST

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮೊದಲ ದಿನ 29 ನಾಮಪತ್ರ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಸಮರದ ಕಾವು ರಾಜ್ಯದಲ್ಲಿ ಶುರುವಾಗಿದ್ದು, ಅಧಿಸೂಚನೆ ಪ್ರಕಟಗೊಂಡ ಮೊದಲನೇ ದಿನವೇ 25 ಅಭ್ಯರ್ಥಿಗಳಿಂದ 29 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಸಮರದ ಕಾವು ರಾಜ್ಯದಲ್ಲಿ ಶುರುವಾಗಿದ್ದು, ಅಧಿಸೂಚನೆ ಪ್ರಕಟಗೊಂಡ ಮೊದಲನೇ ದಿನವೇ 25 ಅಭ್ಯರ್ಥಿಗಳಿಂದ 29 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಏ.4ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. 

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌, ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸೇರಿದಂತೆ 25 ಅಭ್ಯರ್ಥಿಗಳು 29 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. 

23 ಪುರುಷರು, ಇಬ್ಬರು ಮಹಿಳೆಯರು ಸೇರಿ 25 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ 2, ಬಿಜೆಪಿ 1, ಜೆಡಿಎಸ್‌ ಮತ್ತು ಬಿಎಸ್‌ಪಿ ತಲಾ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳ 16, ಪಕ್ಷೇತರರ 8 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಒಟ್ಟು 5 ಅಭ್ಯರ್ಥಿಗಳಿಂದ 6 ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ನಾಲ್ವರು ಪುರುಷರು, ಒಬ್ಬರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. 

ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳಿಂದ 4, ಪಕ್ಷೇತರರಿಂದ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಮೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು 2 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. 

ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1 ಮತ್ತು ಪಕ್ಷೇತರರಿಂದ 1 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಯಿಂದ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್‌ನಿಂದ 2 ಉಮೇದುವಾರಿಕೆ ಸಲ್ಲಿಕೆಯಾಗಿದೆ.

ಚಾಮರಾಜನಗರ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಯಿಂದ 1 ನಾಮಪತ್ರ ಸಲ್ಲಿಕೆಯಾಗಿದ್ದು, ಅದು ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಸಲ್ಲಿಕೆಯಾಗಿದೆ. 

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಿಂದ 1 ಉಮೇದುವಾರಿಕೆ ಸಲ್ಲಿಸಲಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಯಾವುದೇ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ. 

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಂದ 2 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿ ಮತ್ತು ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ತಲಾ ಒಂದೊಂದು ಉಮೇದುವಾರಿಕೆ ಸಲ್ಲಿಕೆಯಾಗಿವೆ. 

ಹಾಸನ ಕ್ಷೇತ್ರದಲ್ಲಿ ಮೂವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಜೆಡಿಎಸ್‌, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಯಿಂದ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದೆ.

ಕೋಲಾರ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಇಬ್ಬರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷ ಮತ್ತು ಪಕ್ಷೇತರರಿಂದ ತಲಾ ಒಂದೊಂದು ಉಮೇದುವಾರಿಕೆ ಸಲ್ಲಿಸಲಾಗಿದೆ. 

ಮೈಸೂರು ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದ ಇಬ್ಬರು ಅಭ್ಯರ್ಥಿಗಳು ಮೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತುಮಕೂರು ಕ್ಷೇತ್ರದಲ್ಲಿ ಇಬ್ಬರು ಪಕ್ಷೇತರರಿಂದ ಎರಡು ಉಮೇದುವಾರಿಕೆ ಸಲ್ಲಿಕೆ ಮಾಡಲಾಗಿದೆ. 

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಒಂದು ನಾಮಪತ್ರ ಸಲ್ಲಿಸಲಾಗಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.8ರಂದು ಉಮೇದುವಾರಿಕೆಗಳನ್ನು ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಏ.26ರಂದು ಮತದಾನ ನಡೆಯಲಿದೆ. ಜೂ.4ರಂದು ಮತ ಎಣಿಕೆ ಜರುಗಲಿದೆ.