ಸಾರಾಂಶ
ವಿಧಾನಮಂಡಲ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ವಿಷಯ ನಿರೀಕ್ಷೆಯಂತೆ ವಿಧಾನ ಮಂಡಲದ ಉಭಯ ಸದನಗಳ ಆರಂಭದ ದಿನವೇ ಪ್ರಸ್ತಾಪವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.
ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷಗಳು ಈ ವಿಷಯವನ್ನು ಉಭಯ ಸದನಗಳಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಚರ್ಚೆಗೆ ಅವಕಾಶ ಪಡೆದುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯು ನಿಲುವಳಿ ಮಂಡಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆಕ್ಷೇಪಿಸಿದ್ದರಿಂದ ತೀವ್ರ ಜಟಾಪಟಿ ಆರಂಭಗೊಂಡಿದ್ದು, ಇದು ಎರಡು ಬಾರಿ ಕಲಾಪ ಮುಂದೂಡಿಕೆಗೂ ಕಾರಣವಾಗಿತ್ತು. ಅಂತಿಮವಾಗಿ ವಿಚಾರ ಚರ್ಚೆಗೆ ಬಂದಾಗ ಬಿಜೆಪಿಯ ಸಿ.ಟಿ.ರವಿ ಅವರು ಯಾರ ಹೆಸರೂ ಉಲ್ಲೇಖಿಸದೆ ‘ಸರ್ಪ’ಕ್ಕೆ ಇನ್ನೊಂದು ಹೆಸರಾದ ಮಾಜಿ ಸಚಿವರು, ನಂ.1, ನಂ.2 ಸ್ಥಾನದಲ್ಲಿರುವವರು ಎಂದಿದ್ದು ಕಾಂಗ್ರೆಸ್ಸಿಗರನ್ನು ಕೆರಳಿಸಿತು. ಇದರಿಂದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಕೆಲ ಕಾಲ ತೀವ್ರ ಮಾತಿನ ವಾಗ್ವಾದ ನಡೆಯಿತು. ಕೊನೆಗೆ ಸಭಾಪತಿಗಳು ಕೆರಳಿಸುವ ಮಾತು ಆಡದೇ ಚರ್ಚಿಸುವಂತೆ ಸಿ.ಟಿ.ರವಿ ಅವರಿಗೆ ಸೂಚಿಸಿದರು.
ಆದರೆ ವಿಧಾನಸಭೆಯಲ್ಲಿ ಮಾತ್ರ ಈ ವಿಷಯ ದೊಡ್ಡಮಟ್ಟದ ಜಟಾಪಟಿಗೆ ಕಾರಣವಾಗಲಿಲ್ಲ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಹಗರಣದ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಪ್ರಕರಣವನ್ನು ಸಿಬಿಐನಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಈಗಾಗಲೇ ಪ್ರಕರಣದ ತನಿಖೆ ಮುಕ್ಕಾಲು ಭಾಗ ಮುಗಿದಿದೆ. ಸತ್ಯ ಹೊರಬರಲಿ, ಈ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಲಿ ಎಂದರು.
ಕಿಂಗ್‌ಪಿನ್ ಜತೆಯಲ್ಲಿ ನಂ.1, ನಂ.2:
ಬಿಜೆಪಿಯ ಸಿ.ಟಿ.ರವಿ ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಕುರಿತು ನಿಯಮ 59ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಮಂಡಿಸಿದ ನಿಲುವಳಿ ಸೂಚನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದರು. ಇದರಿಂದ ಪ್ರತಿಪಕ್ಷ ಸದಸ್ಯರು ಸಭಾಪತಿಗಳ ಮುಂದೆ ಬಂದು ಪ್ರತಿಭಟನೆ ನಡೆಸಿದ ಪರಿಣಾಮ ಎರಡು ಬಾರಿ ಕಲಾಪ ಮುಂದೂಡಿದರು.
ಕೊನೆಗೆ ಅಡ್ವೊಕೇಟ್ ಜನರಲ್ ಅವರ ಜೊತೆ ಸಭಾಪತಿಗಳು ಚರ್ಚಿಸಿ ನಿಯಮ 68 ಅಡಿ ಚರ್ಚಿಸಲು ಅವಕಾಶ ನೀಡಿ ಯಾವುದೇ ಸದಸ್ಯರ ಅಥವಾ ವ್ಯಕ್ತಿಯ ಹೆಸರು ಉಲ್ಲೇಖಿಸದೇ ಮಾತನಾಡುವಂತೆ ಸಿ.ಟಿ.ರವಿ ಅವರಿಗೆ ಸೂಚಿಸಿದರು.
ನಂತರ ಮಾತನಾಡಿದ ಸಿ.ಟಿ. ರವಿ, ವಾಲ್ಮೀಕಿ ನಿಗಮದ ಹಣವನ್ನು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಬಳಸದೆ ಆಡಳಿತ ನಡೆಸುವವರ ಅನುಕೂಲಕ್ಕೆ ಬಳಸಲಾಗಿದೆ. ಇಡೀ ಪ್ರಕರಣದ ಕಿಂಗ್‌ಪಿನ್ ಎಂದು ಗುರುತಿಸಲಾಗಿರುವ ವ್ಯಕ್ತಿಯ ಜತೆಯಲ್ಲಿ ‘ಸರ್ಪ’ಕ್ಕೆ ಇನ್ನೊಂದು ಹೆಸರನ್ನು ಹೊಂದಿರುವ ಮಾಜಿ ಸಚಿವರಾದವರ ವ್ಯಾಪಾರ ಪಾಲುದಾರಿಕೆಯಿದೆ. ಹಾಗೆಯೇ, ಸರ್ಕಾರದ ನಂ.1 ಮತ್ತು ನಂ.2ನೇ ಸ್ಥಾನದಲ್ಲಿರುವವರ ಜೊತೆ ಗಾಢವಾದ ಸ್ನೇಹವಿದೆ. ಅದರಲ್ಲೂ ನಂ.1 ಸ್ಥಾನದಲ್ಲಿರುವವರ ಅಡುಗೆ ಮನೆಗೆ ಹೋಗುವಷ್ಟು ಸಲಿಗೆ ಹೊಂದಿದ್ದಾನೆ. ಹಾಗೆಯೇ, ನಂ.2 ಜತೆಯಲ್ಲಿ ಒಂದೇ ಏರ್‌ಕ್ರಾಫ್ಟ್ ಅಲ್ಲಿ ಹೋಗುತ್ತಾನೆ ಎಂದು ಯಾರ ಹೆಸರೂ ಉಲ್ಲೇಖಿಸದೆ ಆರೋಪಿಸಿದರು.
ನಿಗಮದ ಹಣದಲ್ಲಿ ಕೆಲವರು ಜಮೀನು ಖರೀದಿಸಿದ್ದಾರೆ, ಲ್ಯಾಂಬೋರ್ಗಿನಿಯಂತಹ ಐಷಾರಾಮಿ ಕಾರು ಖರೀದಿಸಿದ್ದಾರೆ. ಇದೆಲ್ಲದರ ಬಗ್ಗೆ ಚರ್ಚೆ ಅಗತ್ಯ. ಇಲ್ಲದಿದ್ದರೆ ಈ ಪಾಪದ ಕೆಲಸದಲ್ಲಿ ನಮ್ಮನ್ನೂ ಪಾಪಿಗಳು, ಭ್ರಷ್ಟರು ಎಂದು ಜನರು ಗುರುತಿಸುತ್ತಾರೆ. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ನಂ.1 ಸ್ಥಾನದಲ್ಲಿರುವವರು ಇತ್ತೀಚೆಗೆ ಅಹಿಂದ ಕಾರ್ಡ್ ಬಳಸುತ್ತಾ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರು, ಸಭಾಪತಿಗಳ ಸ್ಪಷ್ಟ ಸೂಚನೆ ಇದ್ದರೂ ನಂ.1, ನಂ.2 ಎಂಬ ಪದಗಳನ್ನು ಬಳಸುತ್ತಿರುವುದು ತಪ್ಪು. ನಮ್ಮನ್ನು ಕೆಣಕುವಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಯಾರನ್ನೂ ಕೆಣಕುವಂತೆ ಮಾತನಾಡಬೇಡಿ. ಕೇವಲ ವಿಷಯವನ್ನು ಮಂಡಿಸಿ ಎಂದು ಸಿ.ಟಿ.ರವಿ ಅವರಿಗೆ ಸೂಚಿಸಿದರು. ಆದರೂ ಆಡಳಿತ ಪಕ್ಷದ ಸದಸ್ಯರ ಆಕ್ಷೇಪದ ನಡುವೆ ಸಿ.ಟಿ.ರವಿ ಮಾತು ಮುಂದುವರೆಸಿದರು. ಕೊನೆಗೆ ಸಚಿವ ಸಂಪುಟ ಸಭೆ ಇದ್ದ ಕಾರಣ ಕಲಾಪ ಮಂಗಳವಾರಕ್ಕೆ ಮುಂದೂಡಲಾಯಿತು.
ಇನ್ನೂ ನಾಲ್ಕೈದು ಸಚಿವರು ರಾಜೀನಾಮೆ ಕೊಡುತ್ತಾರೆ: ರವಿ
ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ನಮ್ಮ ಹೋರಾಟದಿಂದಾಗಿ ಒಬ್ಬ ಸಚಿವರು ರಾಜೀನಾಮೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಪ್ರತಿ ನಿಗಮ, ಇಲಾಖೆಯಲ್ಲೂ ಭ್ರಷ್ಟಾಚಾರ ಮಾಡಿ ತಾವು ಮಾಡದ ಭ್ರಷ್ಟಾಚಾರವಿಲ್ಲ ಎನ್ನುವಂತಾಗಿದೆ. ಹೀಗೇ ಮುಂದುವರಿದರೆ ಇನ್ನೂ ನಾಲ್ಕೈದು ಸಚಿವರು ರಾಜೀನಾಮೆ ನೀಡುತ್ತಾರೆ ನೋಡ್ತಾ ಇರಿ ಎಂದು ಸಿ.ಟಿ.ರವಿ ಆಡಳಿತ ಪಕ್ಷದವರನ್ನು ಕಿಚಾಯಿಸಿದರು.
ಸಿಬಿಐ ತನಿಖೆಗೆ ಅಶೋಕ್ ಆಗ್ರಹ
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನಿಯಮ 68 ಅಡಿ ಚರ್ಚಿಸಲು ಅವಕಾಶ ನೀಡಿದರು. ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಈ ಬಹುಕೋಟಿ ಹಗರಣ ಏಕಾಏಕಿ ನಡೆದಿದ್ದಲ್ಲ. ಹೋಟೆಲ್ ಶಾಂಗ್ರಿಲಾದಲ್ಲಿ ಪೂರ್ವನಿಯೋಜಿತವಾಗಿ ನಡೆದ ಡೀಲ್. ಇದರಲ್ಲಿ ಸರ್ಕಾರ, ಇಲಾಖಾ ಸಚಿವ, ಅಧಿಕಾರಿಗಳು, ಮದ್ಯವರ್ತಿಗಳು, ಹವಾಲಾಕೋರರು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಹಿಂದೆ ಸಾಕಷ್ಟು ಅಕ್ರಮಗಳು ನಡೆದಿವೆ. ಆದರೆ, ಅವುಗಳು ವಿವಿಧ ಅಭಿವೃದ್ಧಿ ಕಾಮಗಾರಿ, ಯೋಜನೆಗಳಲ್ಲಿ ಶೇ.10, 20ರಷ್ಟು ಕಮಿಷನ್ ಲೆಕ್ಕದಲ್ಲಿ ನಡೆದಿರಬಹುದು. ಆದರೆ, ಈಗ ಬಹಿರಂಗವಾಗಿರುವುದು ಒಂದೇ ಬಾರಿಗೆ ದಲಿತರ 187 ಕೋಟಿ ರು.ಗಳನ್ನು ಕಟಾಕಟ್ ಅಂತ ದೋಚಿ ತೆಲಂಗಾಣಕ್ಕೆ ಕಳುಹಿಸಿರುವುದು. ಕರ್ನಾಟಕದ ಇತಿಹಾಸದಲ್ಲೇ ಸರ್ಕಾರಕ್ಕೆ ಇದೊಂದು ಕಳಂಕ, ಕಪ್ಪು ಚುಕ್ಕೆ. ಇದು ಬೇಲಿಯೇ ಎದ್ದು ಹೊಲ ಮೇದಂತಾಗಿದೆ ಎಂದು ಆರೋಪಿಸಿದರು.
ಈ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಒಬ್ಬರೇ ಇದ್ದಾರೆಯೇ, ಇಲ್ಲವೇ, ಇನ್ನೂ ಯಾವ್ಯಾವ ಕಾಣದ ಕೈಗಳು ಇವೆ ಎಂಬುದು ಹೊರಗೆ ಬರಬೇಕು. ಜೊತೆಗೆ ಈ ಹಗರಣ ಹೊರಬರಲು ಆತ್ಮಹತ್ಯೆ ಮೂಲಕ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಕುಟುಂಬಕ್ಕೂನ್ಯಾಯ ಸಿಗಬೇಕು. ಹಾಗಾಗಿ ಸಮಗ್ರ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಚಂದ್ರಶೇಖರ್ ಆತ್ಮಹತ್ಯೆ, ಆತ್ಮಹತ್ಯೆಗೂ ಮುನ್ನ ಅವರು ಬರೆದಿಟ್ಟಿರುವ ಆರು ಪುಟಗಳ ಡೆತ್‌ನೋಟ್ ಅನ್ನು ಸದನದಲ್ಲಿ ಓದುವುದರಿಂದ ಹಿಡಿದು ಇತ್ತೀಚೆಗೆ ಬಹಿರಂಗವಾದ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ನಡುವೆ ಮಾತುಕತೆ ಸೇರಿದಂತೆ ಹಲವು ಅಂಶಗಳನ್ನೂ ಪ್ರಸ್ತಾಪಿಸಿ ಸರ್ಕಾರವನ್ನು ಅಶೋಕ್ ತರಾಟೆಗೆ ತೆಗೆದುಕೊಂಡರು.