ವಿಜಯಪುರದಲ್ಲಿ ಪ್ರಥಮ ಬಾರಿಗೆ ಕ್ರಾಂತಿಗೀತೆಗಳ ಮೇಳ

| Published : Sep 30 2024, 01:26 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ:ಕವಿ ಪ್ರಕಾಶನದ ಮೇ ಸಾಹಿತ್ಯ ಮೇಳ ಬಳಗ ಹಾಗೂ ಲಡಾಯಿ ಪ್ರಕಾಶನದ ಚಿತ್ತಾರ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ಅ.6ರಂದು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜನಕಲಾ ಸಾಂಸ್ಕೃತಿಕ ಮೇಳ-2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಅನಿಲ ಹೊಸಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:ಕವಿ ಪ್ರಕಾಶನದ ಮೇ ಸಾಹಿತ್ಯ ಮೇಳ ಬಳಗ ಹಾಗೂ ಲಡಾಯಿ ಪ್ರಕಾಶನದ ಚಿತ್ತಾರ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ಅ.6ರಂದು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜನಕಲಾ ಸಾಂಸ್ಕೃತಿಕ ಮೇಳ-2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಅನಿಲ ಹೊಸಮನಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರದಲ್ಲಿ ಮೊದಲ ಬಾರಿಗೆ ಕ್ರಾಂತಿಕಾರಿ ಗೀತೆಗಳ ಮೇಳ ನಡೆಯಲಿದೆ. ವಿಜಯಪುರ ಜಿಲ್ಲೆಯ ಕಲಾವಿದರು, ಕಲಾ ತಂಡಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕಲಾ ತಂಡಗಳು ಭಾಗವಹಿಸಲಿವೆ. ಈ ಮೇಳಕ್ಕೆ ಸರ್ಕಾರದಿಂದ ಅಥವಾ ರಾಜಕಾರಣಿಗಳಿಂದ ನಾವು ಯಾವುದೇ ಸಹಾಯ ಪಡೆಯುತ್ತಿಲ್ಲ. ಬೇರೆ ಬೇರೆ 14 ವೇದಿಕೆ ಹಾಗೂ ಒಕ್ಕೂಟಗಳ ಸಹಯೋಗ ಇರಲಿದ್ದು, ಮೇಳದಲ್ಲಿ 9 ಕಲಾ ತಂಡಗಳು ಭಾಗವಹಿಸಲಿವೆ. ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕ್ರಾಂತಿಕಾರಿ ಸಂದೇಶ ಸಾರುವ ವಿಜಯಪುರದ ಐವರು ಮಹಿಳೆಯರಿಂದ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, 6.45ಕ್ಕೆ ಡಾ.ಎಂ.ಎಂ.ಕಲಬುರ್ಗಿ ಅವರ ಜೀವನಾಧಾರಿತ ರಕ್ತ ವಿಲಾಪ ನಾಟಕವನ್ನು ಸಮುದಾಯ ತಂಡ ಪ್ರಚುರ ಪಡಿಸಲಿದೆ ಎಂದು ಮಾಹಿತಿ ನೀಡಿದರು.ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ ಸೂಳಿಭಾವಿ ಮಾತನಾಡಿ, ಜನಕಲಾ ಸಾಂಸ್ಕ್ರತಿಕ ಮೇಳದಲ್ಲಿ ಸಾಹಿತ್ಯವನ್ನು ಜನಮುಖಿಯಾಗಿಸುವ ಪ್ರಯತ್ನ ನಡೆಯುತ್ತದೆ. ಮೊದಲಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಂತೆ ಈಗ ರಾಜ್ಯದಲ್ಲೂ ದಲಿತ ಸಂಘಟನೆ, ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿವೆ. ಜನಮುಖಿಯಾದಂತ ಸಾಹಿತ್ಯವನ್ನು ಜನಗಳಿಗೆ ತಲುಪಿಸಲು ಹಾಡುಗಾರಿಕೆ ಆರಂಭಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಮೇ ಸಾಹಿತ್ಯ ಮೇಳ ಈ ಕೆಲಸ ಮಾಡುತ್ತಿದೆ. ಜನರಿಗೆ ಸಾಹಿತ್ಯ ತಲುಪಿಸುವುದು, ಬೇರೆ ಬೇರೆ ರಾಜ್ಯಗಳ ಸಾಹಿತ್ಯವನ್ನು ಪರಿಚಯಿಸುವ ಕೆಲಸ ಕೂಡ ಇದರಿಂದ ಆಗಲಿದೆ. ಈಗಾಗಲೇ ದಲಿತ ಚಳುವಳಿಗೆ 50 ವರ್ಷಗಳು ತುಂಬಿದ್ದರಿಂದ, ಇಡೀ ಚಳುವಳಿಯ ಹಿನ್ನೋಟ ಗಮನಿಸುವ ಹಾಗೂ ಅವಲೋಕನ ಕಾರ್ಯ ನಡೆಯಲಿದೆ. ರಾಜ್ಯಾದ್ಯಂತ ತಿರುಗಾಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅನಕ್ಷರಸ್ಥರ ಎದೆಯೊಳಗೆ ಅಂಬೇಡ್ಕರ್ ಅವರ ಹೋರಾಟ, ಚಳುವಳಿಗಳ ಬಗ್ಗೆ ಹಾಡುಗಳ‌ ಮೂಲಕ ತಿಳುವಳಿಕೆಯನ್ನು ಹುಟ್ಟುಹಾಕುವ ಕೆಲಸ ಕಲಾ ತಂಡಗಳಿಂದ ಆಗಲಿದೆ ಎಂದು ತಿಳಿಸಿದರು.ಬಸವಾದಿ ಶರಣರ ವಚನ ತಿದ್ದುಪಡಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಚನಕಾಲ, ಶರಣಕಾಲ, ಬಸವಣ್ಣನವರ ವಚನಗಳನ್ನು ತಿರುಚುವ ಕೆಲಸ ಆಗಬಾರದು. ವಚನ ದರ್ಶನ ಎಂಬ ಪುಸ್ತಕದಲ್ಲಿ ಈ ರೀತಿಯಾಗಿದೆ. ಬಸವಣ್ಣನವರ ವಚನಗಳ ತಿರುಳನ್ನು ತಿರುಚುವ ಕೆಲಸ ಆಗಬಾರದು. ಲಿಂಗಾಯತರು, ಪ್ರಜ್ಞಾವಂತರು ಇದನ್ನು ವಿರೋಧಿಸಬೇಕು. ಇದರ ಹಿಂದಿರುವ ಆರ್‌ಎಸ್‌ಎಸ್‌ ಹಾಗೂ ಇತರೇ ಕುತಂತ್ರಿಗಳ ಕೈವಾಡ ಅರಿತು ಹೋರಾಟಕ್ಕೆ ಇಳಿಯಬೇಕು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಚೆನ್ನು ಕಟ್ಟಿಮನಿ, ಪ್ರಭುಗೌಡ ಪಾಟೀಲ್, ನಾಗರಾಜ ಲಂಬು ಸೇರಿದಂತೆ ಇತರರು ಉಪಸ್ಥಿತರಿದ್ದರು.