ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಪಿಎಂ ವಿಶ್ವಕರ್ಮ ಯೋಜನೆಯಡಿ ದೇಶದಲ್ಲಿ ಇದುವರೆಗೆ 59.88 ಲಕ್ಷ ಜನರು ಆನ್‌ಲೈನ್ ಅರ್ಜಿ ಹಾಕಿದ್ದರೆ, ರಾಜ್ಯದಲ್ಲಿ 18 ಲಕ್ಷ ಮಂದಿ ಅರ್ಜಿ ಹಾಕಿದ್ದಾರೆ. ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಪಿ.ಎಂ. ವಿಶ್ವಕರ್ಮ ಯೋಜನೆಯ ರಾಜ್ಯ ಸಂಚಾಲಕ, ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.
ಇಲ್ಲಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ 61,861 ಮಂದಿ ಆನ್‌ಲೈನ್ ಅರ್ಜಿ ಹಾಕಿದ್ದಾರೆ. ಅಕ್ಕಸಾಲಿಗರು, ಕುಂಬಾರರು, ಬಡಗಿಗಳು, ಶಿಲ್ಪಿಗಳು, ಸವಿತಾ ಸಮಾಜದವರು ಸೇರಿದಂತೆ ಕರಕುಶಲ ಕರ್ಮಿಗಳ ಶ್ರಮವನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅರ್ಜಿ ಹಾಕಿದವರಲ್ಲಿ ಅರ್ಹರನ್ನು ಗುರುತಿಸಿ, ತರಬೇತಿ ನೀಡಲಾಗುವುದು ಎಂದರು.
ಪಿಎಂ ಸ್ವನಿಧಿ: ಪಿಎಂ ಸ್ವನಿಧಿ ಯೋಜನೆಗೆ ₹13 ಸಾವಿರ ಕೋಟಿ ಹಣ ತೆಗೆದಿರಿಸಲಾಗಿದೆ. ರಾಜ್ಯದಲ್ಲಿ 25 ಲಕ್ಷ ಮಂದಿಗೆ ಒಟ್ಟು ₹765 ಕೋಟಿ ಪ್ರೋತ್ಸಾಹಧನ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯಡಿ ಶೇ. 80ರಷ್ಟು ಪ್ರಗತಿ ಸಾಧಿಸಿದ್ದು, ಉಳಿದ ಶೇ. 20ರಷ್ಟು ಗುರಿಯನ್ನು ಈ ತಿಂಗಳ ಅಂತ್ಯದೊಳಗೆ ತಲುಪಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಈ ಯೋಜನೆಯಡಿ 25 ವರ್ಗಗಳು ಬರಲಿದ್ದು, ನೋಂದಣಿ ಮಾಡಿಕೊಂಡ ಫಲಾನುಭವಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ, ಮುಂದಿನ 5 ವರ್ಷಗಳಿಗೆ ಅವಶ್ಯವಿರುವ ಯೋಜನೆ ರೂಪಿಸಲಾಗುವುದು. ಫೆಬ್ರುವರಿ ತಿಂಗಳಲ್ಲಿ ಸಮ್ಮೇಳನ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.
ಪ್ರಚಾರ ಕಾರ್ಯದ ಕೊರತೆ: ಪಿ.ಎಂ ಸ್ವನಿಧಿ ಪ್ರಚಾರ ಕಾರ್ಯಕ್ಕೆ ರಾಜ್ಯಕ್ಕೆ ₹13 ಕೋಟಿ ನೀಡಲಾಗಿದ್ದು, ಅದರಲ್ಲಿ ₹8 ಕೋಟಿ ಖರ್ಚು ಮಾಡಲಾಗಿದೆ. ಹಾವೇರಿ ಜಿಲ್ಲೆಗೆ ₹40 ಲಕ್ಷ ಹಣ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕೇವಲ ₹6 ಲಕ್ಷ ಮಾತ್ರ ಖರ್ಚಾಗಿದ್ದು, ₹34 ಲಕ್ಷ ಬಾಕಿ ಉಳಿದಿದೆ.
ಅಧಿಕಾರಿಗಳು ಆಸಕ್ತಿ ವಹಿಸಿ ಹೆಚ್ಚಿನ ಪ್ರಚಾರ ಕಾರ್ಯ ಕೈಗೊಂಡು ಯೋಜನೆಯನ್ನು ಯಶಸ್ವಿಗೊಳಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮುಖಂಡರಾದ ಲಿಂಗರಾಜ ಪಾಟೀಲ, ಭಾರತಿ ಜಂಬಗಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಕ್ಷಗೌಡ ಪಾಟೀಲ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಕಿರಣ ಕೋಣನವರ್ ಇದ್ದರು.
ಗಣರಾಜ್ಯೋತ್ಸವಕ್ಕೆ ಆಹ್ವಾನ: ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯದಿಂದ 10 ಮಂದಿ ಆಯ್ಕೆಯಾಗಿದ್ದು, ಹಾವೇರಿ ಜಿಲ್ಲೆಯಿಂದ ವಿಶ್ವಕರ್ಮ ಯೋಜನೆಯ ಫಲಾನುಭವಿ ರಮೇಶ ಪಾಲನಕರ್ ಆಯ್ಕೆಯಾಗಿದ್ದಾರೆ ಎಂದು ರಾಮದಾಸ್ ಮಾಹಿತಿ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))