ಮೂಡಿಗೆರೆ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ : ನಯನಾ ಮೋಟಮ್ಮ

| Published : Mar 12 2024, 02:06 AM IST

ಮೂಡಿಗೆರೆ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ : ನಯನಾ ಮೋಟಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ಹೆಚ್ಚು ಗ್ರಾಮೀಣ ಪ್ರದೇಶ ಹೊಂದಿರುವ ಮೂಡಿಗೆರೆ ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಸಿಎಂ ವಿಶೇಷ ಅನುದಾನದಡಿ ರಸ್ತೆಗಳ ಅಭಿವೃದ್ಧಿ, ಪ್ರತಿ ಕ್ಷೇತ್ರಕ್ಕೆ 25 ಕೋಟಿ ರು. ಮೀಸಲು । ಕೆ.ಆರ್‌.ಪೇಟೆಯಲ್ಲಿ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅತಿ ಹೆಚ್ಚು ಗ್ರಾಮೀಣ ಪ್ರದೇಶ ಹೊಂದಿರುವ ಮೂಡಿಗೆರೆ ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬಿಗ್ಗನಹಳ್ಳಿ, ಬೂದನಿಕೆ, ಬಾಣಾವರ ಹಾಗೂ ಕದ್ರಿಮಿದ್ರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು ಒಂದು ಕೋಟಿ ರು. ವೆಚ್ಚದ ಕಾಂಕ್ರಿಟ್ ರಸ್ತೆಗೆ ಚಿಕ್ಕಮಗಳೂರು ತಾಲೂಕಿನ ಕೆ.ಆರ್‌. ಪೇಟೆ ಗ್ರಾಮದಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರ ಪ್ರತಿ ಶಾಸಕರಿಗೆ ತಲಾ 25 ಕೋಟಿ ರು. ಅನುದಾನ ಒದಗಿಸಿ ಅಭಿವೃದ್ಧಿಗೆ ಮೀಸಲಿರಿಸಿದ್ದು, ಈ ಪೈಕಿ 17 ಕೋಟಿ ರು. ಅನುದಾನವನ್ನು ಪ್ರತಿ ಹೋಬಳಿಗೂ ಸಮಾನವಾಗಿ ಹಂಚಿಕೆ ಮಾಡಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಲಿರುವ ಕಾರಣ ಸಾಂಕೇತಿಕವಾಗಿ ಪ್ರತಿ ಹೋಬಳಿಗಳಿಗೆ ಖುದ್ದು ಭೇಟಿ ನೀಡಿ, ರಸ್ತೆಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದು, 100ಕ್ಕೂ ಹೆಚ್ಚು ವಿವಿಧ ಕಾಮಗಾರಿಗಳಿರುವ ಹಿನ್ನೆಲೆಯಲ್ಲಿ ಮಳೆಗಾಲ ಸಮೀಪಿಸುವ ಮೊದಲೇ ರಸ್ತೆ ಕಾಮಗಾರಿಯನ್ನು ಪೂರೈಸಬೇಕು ಎಂದು ಸೂಚನೆ ನೀಡಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 17 ಕೋಟಿ ರು. ಗಳನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿ, 1.50 ಕೋಟಿ ಲೋಕೋಪಯೋಗಿ ಇಲಾಖೆ, 3 ಕೋಟಿ ರು. ದೇವಾಲಯಗಳ ಅಭಿವೃದ್ಧಿ ಹಾಗೂ 3.50 ಕೋಟಿ ಅನುದಾನವನ್ನು ಸಮುದಾಯ ಭವನ ನಿರ್ಮಾಣ ಸೇರಿ ಒಟ್ಟು 25 ಕೋಟಿ ರು. ಮೀಸರಿಸಲಾಗಿದೆ ಎಂದು ತಿಳಿಸಿದರು. ನಿವೇಶನ ರಹಿತರ ಸಂಬಂಧ ಪ್ರತಿಕ್ರಿಯಿಸಿದ ಅವರು, ಅರ್ಹ ಫಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಜಾಗ ಕಾಯ್ದಿರಿಸಿದೆ. ಗುರುತಿಸಿರುವ ಕೆಲವು ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದು ಲೋಕಸಭಾ ಚುನಾವಣಾ ಬಳಿಕ ಹಕ್ಕುಪತ್ರ ವಿತರಿಸುವ ಸಂಬಂಧ ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಪಂ ಮೂಲಕ ಮುಂದಿನ ಕ್ರಮ ವಹಿಸಲಾಗುವುದು ಎಂದರು. ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ಬಿ.ಬಿ.ಸೋಮೇಗೌಡ ಮಾತನಾಡಿ, ಕಳೆದ ಎರಡು ದಶಕಗಳಿಂದ ಗ್ರಾಮಗಳಿಗೆ ತೆರಳುವ ರಸ್ತೆ ದುಸ್ಥಿತಿಯಲ್ಲಿತ್ತು. ಇದೀಗ ಶಾಸಕರು ರಸ್ತೆಗಳ ಪರಿಸ್ಥಿತಿ ಗುರುತಿಸಿ ಕಾಂಕ್ರಿಟ್ ರಸ್ತೆಗೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ತರಿಸಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ಗ್ರಾಪಂ ಅಧ್ಯಕ್ಷೆ ಗೀತಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುದಾಪೀರ್, ಹೋಬಳಿ ಅಧ್ಯಕ್ಷ ವಿಜಯ್‌ಕುಮಾರ್, ಗ್ರಾಮಸ್ಥರಾದ ದೇವರಾಜ್, ಪ್ರಕಾಶ್, ಕುಮಾರ ಶೆಟ್ಟಿ, ಬಲರಾಮ್‌ ಶೆಟ್ಟಿ, ಹರೀ ಶ್, ಅರೇಹಳ್ಳಿ ಪ್ರಕಾಶ್, ಈರಯ್ಯ ಹಾಜರಿದ್ದರು.

11 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಕೆ.ಆರ್‌. ಪೇಟೆ ಗ್ರಾಮದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಸೋಮವಾರ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.