ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದು ಮೊದಲ ಆದ್ಯತೆ: ಆಯನೂರು ಮಂಜುನಾಥ್

| Published : May 27 2024, 01:06 AM IST / Updated: May 27 2024, 01:30 PM IST

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದು ಮೊದಲ ಆದ್ಯತೆ: ಆಯನೂರು ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರುವವರಿಗೆ ನೂತನ ಪಿಂಚಣಿ ವ್ಯವಸ್ಥೆ ಬದಲು ಪುನಹ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎನ್ನುವುದು ನನ್ನ ಮೊದಲ ಅದ್ಯತೆ ಹಾಗೂ ಅದು ಜಾರಿಯಾಗುವವರೆಗೂ ನನ್ನ ಹೋರಾಟ ಬಿಡುವುದಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದ್ದಾರೆ.

 ತರೀಕೆರೆ :  ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರುವವರಿಗೆ ನೂತನ ಪಿಂಚಣಿ ವ್ಯವಸ್ಥೆ ಬದಲು ಪುನಹ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎನ್ನುವುದು ನನ್ನ ಮೊದಲ ಅದ್ಯತೆ ಹಾಗೂ ಅದು ಜಾರಿಯಾಗುವವರೆಗೂ ನನ್ನ ಹೋರಾಟ ಬಿಡುವುದಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ಅರಮನೆ ಸಭಾಂಗಣದಲ್ಲಿ ನಡೆದ ಶಿಕ್ಷಕ ಮತ್ತು ಪದವಿಧರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ 2.5 ಲಕ್ಷ ನೌಕರರು ಎನ್.ಪಿ.ಎಸ್. ಅಡಿಯಲ್ಲಿ ನೇಮಕವಾಗಿದ್ದಾರೆ. ಇವರ ಜೊತೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆ, ಅರೆ ಸರಕಾರಿ ಸ್ವಾಯತ್ತ ಸಂಸ್ಥೆಗಳ ನಿವೃತ್ತ ನೌಕರರಿಗೂ ಒ.ಪಿ.ಎಸ್. ವ್ಯವಸ್ಥೆ ಜಾರಿಯಾಗಬೇಕು. ಇದಕ್ಕಾಗಿ ಸದನದಲ್ಲಿ ಸರಕಾರದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜನಪ್ರತಿನಿಧಿಗಳಿಗೆ ಹಳೇ ಪಿಂಚಣಿ ವ್ಯವಸ್ಥೆ ಇದೆ, ದಶಕಗಳ ಕಾಲ ಜನರ ಸೇವೆ ಸಲ್ಲಿಸುವ ಸರಕಾರಿ ನೌಕರರಿಗೆ ಏಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಸರ್ಕಾರಿ ಸೇವೆಯಲ್ಲಿ 30 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸುವ ಸರಕಾರಿ ನೌಕರರು ತಮ್ಮ ಬಾಳಿನ ಮುಸ್ಸಂಜೆಯಲ್ಲಿ ಅನಿಶ್ಚಿತತೆ ಮತ್ತು ಅಭದ್ರತೆಯಲ್ಲಿ ಬಳಲುವಂತಾಗಿದೆ. ಕಾರಣ ಸರಕಾರ ಎನ್.ಪಿ.ಎಸ್.ಯೋಜನೆ ಜಾರಿಗೆ ತಂದಿರುವುದು ಸರಕಾರ ಶಾಸಕ ಸಂಸದರಿಗೆ ನೀಡುತ್ತಿರುವ ಪಿಂಚಣಿ ವ್ಯವಸ್ಥೆ ರದ್ದು ಪಡಿಸಿ ಅವರಿಗೂ ನೂತನ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಇದು ನನ್ನ ಗಟ್ಟಿ ನಿಲುವು. ಈಗಾಗಲೇ ಕಾಂಗ್ರೆಸ್ ಸರಕಾರ ಒ.ಪಿ.ಎಸ್.ಜಾರಿಗೆ ತರುವು ದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. 

2006ರಿಂದ ಇತ್ತೀಚೆಗ ನೇಮಕಗೊಂಡ ಸರಕಾರಿ ನೌಕರರಿಗೆ ಒ.ಪಿ.ಎಸ್. ಜಾರಿಗೆ ತರುವ ತನಕ ವಿರಮಿಸುವುದಿಲ್ಲ ಎಂದರು.ಕಾಲೇಜು ದಿನಗಳಿಂದಲೇ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದವನು, ನಾನು ವಿದ್ಯಾರ್ಥಿ ಹೋರಾಟ, ಕಾರ್ಮಿಕರ ಹೋರಾಟ ಮಾಡಿಕೊಂಡು ಬಂದಿದ್ದೇನೆ.

 ಬೆವರು ಹರಿಸಿ ದುಡಿಯುವ ವರ್ಗ ಎಂದಿಗೂ ಅನ್ಯಾಯ ವಾಗಕೂಡದು ಎಂದು ಅವರ ಪರ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನೊಂದವರ ಹೃದಯವಾಗಿ ನಿಂತಿದ್ದೇನೆ. ರಾಜಕಾರಣದಲ್ಲಿ ಶಾಸಕ, ಸಂಸದ, ರಾಜ್ಯಸಭೆ ಸದಸ್ಯ ಮತ್ತು ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ ಅನುಭವ ನನಗಿದೆ. ಆದರೆ ಈ ಎಲ್ಲಾ ಕಾಲಘಟ್ಟದಲ್ಲೂ ನೌಕರರ, ಶೋಷಿತ ಮತ್ತು ಕಾರ್ಮಿಕರ ಹಿತಾಸಕ್ತಿಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕೆಲ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು. ಸರಕಾರ ನಡೆಸುವ ಮುಖ್ಯಸ್ಥರು ಶಿಕ್ಷಕರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಮತ್ತು ಸೌಜನ್ಯಕ್ಕೂ ಅಂತಹ ಕುಟುಂಬಗಳಿಗೆ ಸಾಂತ್ವನ ಹೇಳಲಿಲ್ಲ, ಆದರೆ ಅವರ ಮನೆ ಸಾಕು ನಾಯಿ ಮೃತಪಟ್ಟಾಗ ಕಣ್ಣೀರು ಸುರಿಸಿ, ಶವ ಸಂಸ್ಕಾರ ನಡೆಸಿ ಅದಕ್ಕೊಂದು ಗದ್ದುಗೆ ಕಟ್ಟಿಸಿದರು, ಪಶು ಪ್ರೀತಿ ತೋರಿದ ಅವರ ನಿಲುವು ಬಗ್ಗೆ ನನ್ನ ವಿರೋಧವಿಲ್ಲ, ಆದರೆ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಶಿಕ್ಷಕರ ಮೇಲೆ ಏಕೆ ಕನಿಕರ ತೋರಲಿಲ್ಲ ಎಂದು ಪ್ರಶ್ನಿಸಿದರು.

ಎನ್.ಪಿ.ಎಸ್.ಅಧ್ಯಕ್ಷ ಡಾ.ದೇವರಾಜ್ ಮಾತನಾಡಿ ಸರಕಾರ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿರುವುದರಿಂದ ನೌಕರರು ನಿವೃತ್ತಿ ನಂತರ ಬಹು ಕಷ್ಟದ ಜೀವನ ಸಾಗಿಸಬೇಕಾಗುತ್ತದೆ. ವಯೋಧರ್ಮದಂತೆ ಅವರು ಅನಾರೋಗ್ಯ ಪೀಡಿತರಾದಲ್ಲಿ ಅವರಿಗೆ ಬರುವ ನಿವೃತ್ತಿ ಹಣದಲ್ಲಿ ಔಷಧಿ ಕೊಂಡುಕೊಳ್ಳುವುದು ಕಷ್ಟ. ಸರಕಾರ ಹೊಸ ಪಿಂಚಣಿ ಯೋಜನೆ ಕೈಬಿಟ್ಟು ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದರುಟಿ.ಎಸ್.ಪ್ರಕಾಶ್ ವರ್ಮ, ಕೆ.ಪಿ.ಸಿ.ಸಿ.ಉಸ್ತುವಾರಿ ರಮೇಶ್ ಶೆಟ್ಟಿ ಇದ್ದರು.