ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 1997-98ನೇ ಸಾಲಿನಲ್ಲಿ ಏಳನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.
ಗಂಗಾವತಿ: ಎರಡೂವರೆ ದಶಕಗಳ ಬಳಿಕ ಮೊದಲ ಬಾರಿಗೆ ಭೇಟಿಯಾದ ಅವರಲ್ಲಿ ಖುಷಿ ಮನೆ ಮಾಡಿತ್ತು. ಪರಸ್ಪರ ಮುಖ ಪರಿಚಯ ಅಸ್ಪಷ್ಟವಾಗಿದ್ದರೂ ಕೆಲವೇ ಹೊತ್ತಿನಲ್ಲಿ ಹಳೆಯ ಸ್ನೇಹಿತರು ಒಂದುಗೂಡಿದರು. ಬಳಿಕ ಅವರಲ್ಲಿ ಖುಷಿ, ಸಂಭ್ರಮ, ನೆನಪುಗಳ ಸಮ್ಮಿಲನ ಮನೆ ಮಾಡಿತ್ತು.
ಇದು ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 1997-98ನೇ ಸಾಲಿನಲ್ಲಿ ಏಳನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಕಂಡುಬಂದ ಚಿತ್ರಣ.ಶಾಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧೆಡೆ ನೆಲೆಸಿದ ಸ್ನೇಹಿತರು ಒಂದುಗೂಡಿದ್ದರು. ಹಿಂದೆ ಕಲಿಸಿದ ಶಿಕ್ಷಕರು, ಮೃತಪಟ್ಟ ಶಿಕ್ಷಕರ ಕುಟುಂಬದವರು ಹಾಗೂ ಶಾಲೆಯ ಈಗಿನ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳು ಮೊದಲು ಹೂಮಳೆಗೆರೆದು ಭರ್ಜರಿ ಸ್ವಾಗತ ಕೋರಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಎರೆಣ್ಣ ಅವರು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿದ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯ ಭಾವ ಮೂಡಿದೆ. ಪ್ರತಿಯೊಬ್ಬರಲ್ಲಿ ಶಿಸ್ತು, ಸ್ವಚ್ಚತೆ ಹಾಗೂ ಸಮಯ ಪ್ರಜ್ಞೆ ಅಗತ್ಯ ಎಂದರು.ನಿವೃತ್ತ ಶಿಕ್ಷಕ ವಿಜಯಾಚಾರ್ ಆಲೂರು ಮಾತನಾಡಿ, ಪ್ರತಿ ವಿದ್ಯಾರ್ಥಿಗಳು ಹೂವಿನಂತೆ ಕಾಣುತ್ತಿದ್ದೀರಿ, ಹೃದಯ ತುಂಬಿ ಬರುತ್ತಿದೆ, ಪೋಷಕರನ್ನು ಯಾರೂ ವೃದ್ಧಾಶ್ರಮಕ್ಕೆ ಕಳಿಸಬೇಡಿ ಎಂದು ಕಿವಿಮಾತು ಹೇಳಿದರು.
ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ನಿವೃತ್ತ ಶಿಕ್ಷಕರಾದ ಮಲ್ಲಾರಾವ್ ಕುಲಕರ್ಣಿ, ನರ್ಮದಾಬಾಯಿ, ಶಿಕ್ಷಕರಾದ ಶಶಿಕಲಾ, ರಾಜೇಶ್ವರಿ, ವೆಂಕಟೇಶ್, ಉಮಾದೇವಿ, ವೀಣಾ, ನೀಲಾಂಬಿಕಾ, ಶಾಲೆಯ ಹಿರಿಯ ಶಿಕ್ಷಕ ಸದಾನಂದ, ಎಸ್.ಡಿ.ಎಂ.ಸಿ. ಅಧ್ಯಕ್ಷ ದುರ್ಗಪ್ಪ ನಡವಲಮನಿ, ನಿವೃತ್ತ ಶಿಕ್ಷಕರ ಕುಟುಂಬದವರಾದ ಸರೋಜಮ್ಮ ಚಂದ್ರಶೇಖರ್, ಖಮರುನ್ನಿಸಾ ಬೇಗಂ ಪಾಲ್ಗೊಂಡಿದ್ದರು. ಶಿಕ್ಷಕ ದೇವಣ್ಣ ಕಾರ್ಯಕ್ರಮ ನಿರೂಪಿಸಿದರು.